ಮಂಗಳೂರು: ಅಕ್ರಮವಾಗಿ ಗೋವುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದವರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಈಶ್ವರಮಂಗಲ ಬಳಿ ಘಟನೆ ನಡೆದಿದೆ.
ಅಕ್ರಮವಾಗಿ ಕೇರಳಕ್ಕೆ ಜಾನುವಾರುಗಳನ್ನು ಖದೀಮರು ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಲಾರಿಯನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ, ಈ ವೇಳೆ ಪೊಲೀಸರ ಮೇಲೆ ಖದೀಮರು ಲಾರಿ ಹತ್ತಿಸಲು ಯತ್ನಿಸಿ ಪರಾರಿಯಾಗಿದ್ದಾರೆ.
ಬೆಳ್ಳಿಚಡವು ವರೆಗೆ ಲಾರಿಯನ್ನು ಚೇಸ್ ಮಾಡಿದ ಪೊಲೀಸರು ವಾಹನ ತಡೆದಿದ್ದಾರೆ. ಜಾನುವಾರು ಸಾಗಣೆದಾರರು ವಾಹನ ನಿಲ್ಲಿಸಿ ಪರಾರಿಯಾಗಲೆತ್ನಿಸಿದ್ದು, ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಆತ್ಮ ರಕ್ಷಣೆಗಾಗಿ ಫೈರಿಂಗ್ ಮಾಡಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಪುತ್ತೂರು ಗ್ರಾಮೀಣ ಠಾಣೆಯ ಪಿಎಸ್ಐ ಜಂಬುರಾಜ್ ಮಹಾಜನ್ ಫೈರಿಂಗ್ ಮಾಡಿದ್ದಾರೆ. ಗಾಯಗೊಂಡ ಆರೋಪಿ ಕೇರಳದ ಅಬ್ದುಲ್ಲಾನನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಆರೋಪಿಗಳು ಸಾಗಿಸುತ್ತಿದ್ದ 10 ಜಾನುವಾರು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಎಸ್ಪಿ ಡಾ. ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.