ಕಲಬುರಗಿ: ಲಂಚ ಪಡೆಯುತ್ತಿದ್ದ ಶಿಕ್ಷಣ ಇಲಾಖೆ ನೌಕರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಘಟನೆ ನಡೆದಿದೆ.
ಪ್ರಥಮ ದರ್ಜೆ ಸಹಾಯಕ ಶಿವಲಿಂಗಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು. ನಿವೃತ್ತಿ ವೇತನ ಮತ್ತು ಇತರೆ ಸರ್ಕಾರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಂದ 25 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಯಾದಗಿರಿಯ ರಜಾಕ್ ಬೇಗಮ್ ಅವರ ನಿವೃತ್ತಿ ವೇತನ ಮತ್ತು ಇತರೆ ಸರ್ಕಾರಿ ಸೌಲಭ್ಯಗಳ ಲೆಕ್ಕಾಚಾರದ ದಾಖಲೆ ಸಲ್ಲಿಸಲು ಶಿವಲಿಂಗಪ್ಪ 28,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ರಜಾಕ್ ಬೇಗಮ್ ಅವರ ಪುತ್ರ ಅಫ್ರೀದಿ ಅವರಿಂದ ಫೋನ್ ಪೇ ಮೂಲಕ 25000 ರೂ. ಪಡೆಯುವ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಅರುಣಕುಮಾರ್ ಮುರಗುಂಡಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
