ಬೆಂಗಳೂರು: ಅತ್ತೆಯ ಮೇಲೆ ಅಳಿಯ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿದ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ.
ರುಕ್ಮಿಣಿ ಹಲ್ಲೆಗೊಳಗಾದವರು. ತಿಮ್ಮರಾಯಸ್ವಾಮಿ ದೇವಾಲಯದ ರಸ್ತೆಯಲ್ಲಿ ಡೆಡ್ಲಿ ಅಟ್ಯಾಕ್ ನಡೆದಿದೆ. ಅಳಿಯ ವೇಣುಗೋಪಾಲ್ ಅತ್ತೆ ರುಕ್ಮಿಣಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಇವರು ಆನೇಕಲ್ ಪಟ್ಟಣದ ಶಂಕರನಾಗ್ ರಸ್ತೆಯ ನಿವಾಸಿಗಳಾಗಿದ್ದಾರೆ.
ಲವ್ ಮಾಡಿ ರುಕ್ಮಿಣಿಯ ಮಗಳು ನಂದಿನಿಯನ್ನು ವೇಣುಗೋಪಾಲ್ ಮದುವೆಯಾಗಿದ್ದ, 7 ವರ್ಷದ ಹಿಂದೆ ರುಕ್ಮಿಣಿ ಮಗಳು ನಂದಿನಿಯ ಜೊತೆಗೆ ವಿವಾಹವಾಗಿದ್ದು, ಕಳೆದ ಒಂದು ತಿಂಗಳಿನಿಂದ ಗಂಡ ಹೆಂಡತಿಯ ನಡುವೆ ಜಗಳವಾಗಿತ್ತು. ಗಂಡನನ್ನು ತೊರೆದು ನಂದಿನಿ ತವರು ಮನೆ ಸೇರಿದ್ದರು.
ಗಂಡ -ಹೆಂಡತಿ ಜಗಳಕ್ಕೆ ಅತ್ತೆ ರುಕ್ಮಿಣಿ ಕಾರಣವೆಂದು ಹಲ್ಲೆ ಮಾಡಿದ್ದಾನೆ. ದೇವಸ್ಥಾನಕ್ಕೆ ಹೋಗಿ ಸ್ನೇಹಿತೆಯರ ಜೊತೆಗೆ ಬರುವಾಗ ಹಿಂಬಾಲಿಸಿಕೊಂಡು ಬಂದು ರುಕ್ಮಿಣಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರುಕ್ಮಿಣಿ ಅವರ ಪಕ್ಕದಲ್ಲಿ ಕುಳಿತಿದ್ದ ಅಳಿಯ ವೇಣುಗೋಪಾಲನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರುಕ್ಮಿಣಿಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.