ನವದೆಹಲಿ: ಕಾಂಗ್ರೆಸ್ ಪಕ್ಷ ವೋಟ್ ಚೋರಿ ಎಂದು ಸುಳ್ಳು ಆರೋಪ ಮಾಡಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್.ಡಿ.ಎ. ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವಿಭಜನೆ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಜೊತೆಗೆ ಕೈಜೋಡಿಸಿದವರಿಗೆ ಇವತ್ತು ಅರಿವಾಗುತ್ತಿದೆ. ಎಲ್ಲರನ್ನೂ ಕಾಂಗ್ರೆಸ್ ಪಕ್ಷ ಜೊತೆಗೆ ಮುಳುಗಿಸುತ್ತಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಾವು ಕೆರೆಯಲ್ಲಿ ಮುಳುಗಿ ತಮ್ಮ ಜೊತೆಗೆ ಇರುವವರನ್ನು ಕೂಡ ಮತದಾನದ ಕೆರೆಯಲ್ಲಿ ಮುಳುಗಿಸಿದ್ದಾರೆ. ಮುಂದೆ ಕಾಂಗ್ರೆಸ್ ವಿಭಜನೆ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಕಳೆದ ಮೂರು ಲೋಕಸಭೆ ಚುನಾವಣೆಯಲ್ಲಿ ಮೂರು ಸಂಖ್ಯೆಯನ್ನು ಕಾಂಗ್ರೆಸ್ ದಾಟಿಲ್ಲ. 2024ರ ಚುನಾವಣೆ ನಂತರ ಆರು ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಕಾಂಗ್ರೆಸ್ 100 ಸಂಖ್ಯೆಗಳನ್ನು ದಾಟಲು ಸಾಧ್ಯವಾಗಿಲ್ಲ. ನಾವು ಬಿಹಾರದಲ್ಲಿ ಗೆದ್ದಷ್ಟು ಕಾಂಗ್ರೆಸ್ ಆರು ಚುನಾವಣೆಗಳಲ್ಲಿಯೂ ಗೆದ್ದಿಲ್ಲ ಎಂದಿದ್ದಾರೆ.
ಬಿಹಾರದ ಮತದಾರರು ಸ್ಪಷ್ಟ ಸಂದೇಶ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರೇ ಗೆಲುವಿನ ದೊಡ್ಡ ಶಕ್ತಿಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲೂ ಗೆಲುವು ಸಾಧಿಸುತ್ತೇವೆ. ಬಿಹಾರದ ಫಲಿತಾಂಶ ಪಶ್ಚಿಮ ಬಂಗಾಳಕ್ಕೆ ದಾರಿ ಮಾಡಿಕೊಟ್ಟಿದೆ. ದೇಶದ ಪ್ರತಿಯೊಬ್ಬ ಹೂಡಿಕೆದಾರರಿಗೂ ಬಿಹಾರದ ಬಾಗಿಲು ತೆರೆದಿದ್ದೇವೆ. ಬಿಹಾರದ ಪ್ರತಿಯೊಬ್ಬರ ತಾಯಿ, ಪ್ರತಿ ಯುವಕರು, ರೈತರಿಗೆ ಹೇಳುತ್ತೇನೆ. ನಿಮ್ಮ ಭರವಸೆಯೇ ನನ್ನ ಆದ್ಯತೆ. ನಿಮ್ಮ ಆಸೆಯೇ ನನ್ನ ಸಂಕಲ್ಪ. ನಿಮ್ಮ ಆಕಾಂಕ್ಷೆಯೇ ನನ್ನ ಭರವಸೆಯಾಗಿದೆ. ಎನ್.ಡಿ.ಎ. ಬೆಂಬಲಿಸಿದ ಬಿಹಾರದ ಜನತೆಗೆ ಧನ್ಯವಾದಗಳು. ನಾವೆಲ್ಲರೂ ಸೇರಿ ವಿಕಸಿತ ಬಿಹಾರವನ್ನು ನಿರ್ಮಾಣ ಮಾಡೋಣ ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ನವರು ವೋಟ್ ಚೋರಿ ಸುಳ್ಳು ಆರೋಪ ಮಾಡಿದ್ದರು. ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಕಾಂಗ್ರೆಸ್ ಪಕ್ಷ ಟೀಕಿಸಿತ್ತು. ನೆಗೆಟಿವ್ ಪಾಲಿಟಿಕ್ಸ್ ಅನ್ನು ಬಿಹಾರದ ಜನರು ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಇಂದು ಕಾಂಗ್ರೆಸ್ ‘ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್’ ಆಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಮೇಲಿನ ಜನರ ನಂಬಿಕೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಮುಂದೆ ಪಶ್ಚಿಮ ಬಂಗಾಳದ ಜಂಗಲ್ ರಾಜ್ ಸರ್ಕಾರವನ್ನು ಕಿತ್ತೊಗೆಯುತ್ತೇವೆ. ಬಂಗಾಳದ ಜಂಗಲ್ ರಾಜ್ ಸರ್ಕಾರವನ್ನು ಬೇರು ಸಹಿತ ಕಿತ್ತು ಹಾಕುತ್ತೇವೆ. ಬಿಹಾರದ ಜನರಿಗೆ ಬಿಹಾರದಲ್ಲಿಯೇ ಉದ್ಯೋಗ ಸಿಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಐತಿಹಾಸಿಕ ಗೆಲುವಿಗೆ ನಿತೀಶ್ ಕುಮಾರ್ ಅದ್ಭುತ ನಾಯಕತ್ವ ಕಾರಣವಾಗಿದೆ. ಇದು ಪ್ರಜಾಪ್ರಭುತ್ವದ ಗೆಲುವು. ಬಿಹಾರದ ಚುನಾವಣೆಯಲ್ಲಿ ಯಾವುದೇ ಹಿಂಸಾಚಾರ ಆಗಿಲ್ಲ. ಮರು ಮತದಾನ ಸಹ ನಡೆದಿಲ್ಲ. ಬಿಹಾರದಲ್ಲಿ ಇನ್ನು ಮುಂದೆ ಎಂದು ಜಂಗಲ್ ರಾಜ್ ಸರ್ಕಾರ ಬರುವುದಿಲ್ಲ. ಜಾಮೀನಿನ ಮೇಲೆ ಹೊರಗಿರುವವರನ್ನು ಬಿಹಾರದ ಜನರು ಬೆಂಬಲಿಸಿಲ್ಲ. ಬಿಹಾರದವರನ್ನು ವಿಪಕ್ಷ ನಾಯಕರು ಅಪಮಾನ ಮಾಡಿದ್ದರು. ಛತ್ ಪೂಜೆ ನಾಟಕ ಎಂದು ಕರೆದವರಿಗೆ ಜನ ತಕ್ಕ ಉತ್ತರ ನೀಡಿದ್ದಾರೆ. ಬಿಹಾರದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಮೋದಿ ಹೇಳಿದ್ದಾರೆ.
ಇಂದಿನ ಐತಿಹಾಸಿಕ ತೀರ್ಪು ಪ್ರತಿಯೊಬ್ಬ ಮಹಿಳೆಯರ ಗೆಲುವಾಗಿದೆ. ಮಹಾರಾಷ್ಟ್ರ, ದೆಹಲಿ ಚುನಾವಣೆಯಲ್ಲೂ ಮತದಾರರು ಬೆಂಬಲಿಸಿದ್ದರು. ಎಲ್ಲಾ ಜಾತಿ ಧರ್ಮದವರು ಎನ್.ಡಿ.ಎ.ಗೆ ಆಶೀರ್ವಾದ ಮಾಡಿದ್ದಾರೆ. ನಮ್ಮನ್ನು ಬೆಂಬಲಿಸಿದ ಜನರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.
