ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನವೆಂಬರ್ ಕ್ರಾಂತಿಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಮುಡಾ ಹಗರಣ ಸಂಬಂಧ ಕೋರ್ಟ್ ಆದೇಶದ ಬಳಿಕ ಯತೀಂದ್ರ ಅವರು ತಮ್ಮ ತಂದೆ ಸಿದ್ಧರಾಮಯ್ಯನವರಿಗೆ ತಿಳಿವಳಿಕೆ ನೀಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿಸಬಹುದು ಎಂದು ತಿಳಿಸಿದ್ದಾರೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ, ಮುಡಾ ಪ್ರಕರಣ ಸಂಬಂಧ ಇಂದು ನಡೆದ ವಿಚಾರಣೆ ಸಂದರ್ಭದಲ್ಲಿ, ತನಿಖಾಧಿಕಾರಿ ಸಲ್ಲಿಸಿರುವ “ಬಿ” ಅಂತಿಮ ವರದಿ ಸಂಬಂಧ ದಿನಾಂಕ :-18.12.2025 ರಂದು ಆದೇಶ ಮಾಡುವುದಾಗಿ ಮಾನ್ಯ ನ್ಯಾಯಾಲಯವು ದಿನಾಂಕ ನಿಗದಿಪಡಿಸಿದೆ.
ಬಹುಶಃ ಈ ಆದೇಶವಾದ ನಂತರ ರಾಜ್ಯ ರಾಜಕೀಯದಲ್ಲಿ ನಡೆಯಬೇಕಾಗಿದ್ದ ನವೆಂಬರ್ ಕ್ರಾಂತಿ ಬದಲು ಡಿಸೆಂಬರ್ ಕ್ರಾಂತಿ ನಡೆಯಬಹುದು! ಏಕೆಂದರೆ ಯಾವುದಾದರೂ ಹಗರಣ ಇದ್ದರೆ ಮುಖ್ಯಮಂತ್ರಿ ಸ್ಥಾನವನ್ನು ಬದಲಾಯಿಸಬಹುದು ಎಂದು ಸ್ವತಃ ಸಿದ್ದರಾಮಯ್ಯನವರ ಮಗ ಯತೀಂದ್ರರವರು ಮಾದ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.
ಮುಡಾ ಪ್ರಕರಣ ದಾಖಲಾಗುತ್ತಿದ್ದಂತೆ ತಮ್ಮ ತಾಯಿ ಪಾರ್ವತಿರವರಿಗೆ ಸೂಕ್ತ ತಿಳಿವಳಿಕೆ ನೀಡಿ ಅಕ್ರಮವಾಗಿ ಪಡೆದಿದ್ದ 24 ನಿವೇಶನಗಳನ್ನು ಒಂದೇ ದಿನದಲ್ಲಿ ವಾಪಾಸ್ಸು ಕೊಡಿಸಿದ್ದ ಯತೀಂದ್ರರವರು, ನ್ಯಾಯಾಲಯ ಆದೇಶ ಮಾಡಿ, ಬಿ ಅಂತಿಮ ವರದಿ ತಿರಸ್ಕರಿಸಿ, ಹಗರಣ ನಡೆದಿದೆ, ವಿಚಾರಣೆ ನಡೆಸುವುದು ಸೂಕ್ತ ಎಂದು ಆದೇಶ ಮಾಡಿದರೆ, ಯತೀಂದ್ರ ಅವರು ತಮ್ಮ ತಂದೆ ಸಿದ್ದರಾಮಯ್ಯನವರಿಗೆ ತಿಳುವಳಿಕೆ ನೀಡಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಬಹುದು ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ.
