ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್’ ಆದೇಶ ಹೊರಡಿಸಿದ್ದು, ಬೆಂಗಳೂರಿನ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಬಗ್ಗೆ ಆದೇಶ ಸದ್ಯಕ್ಕಿಲ್ಲ. ಇಡಿ ಕೂಡ ತಕರಾರು ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ಆದೇಶ ಹೊರಡಿಸಿದೆ.
ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಮೊದಲು ಅಂತಿಮ ರಿಪೋರ್ಟ್ ಸಲ್ಲಿಸಲಿ ನಂತರ ಈ ಬಗ್ಗೆ ಆದೇಶ ಹೊರಡಿಸಲಾಗುತ್ತದೆ ಎಂದು ಹೇಳಿದ ನ್ಯಾಯಾಧೀಶರು ಮೇ.7 ಕ್ಕೆ ವಿಚಾರಣೆ ಮುಂದೂಡಿದ್ದಾರೆ. ತನಿಖೆ ಮುಂದುವರೆಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖಾ ವರದಿಗೆ ದೂರುದಾರ ಸ್ನೇಹಮಯಿ ಕೃಷ್ಣ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಹೊರಡಿಸಿದೆ. ವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್’ನ ನ್ಯಾಯಮೂರ್ತಿ ಗಜಾನನ ಭಟ್ ಈ ಆದೇಶ ಹೊರಡಿಸಿದ್ದಾರೆ.
ಮುಡಾ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ, ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ಆರು ಜನರಿಗೆ ಕ್ಲೀನ್ ಚಿಟ್ ನೀಡಿತ್ತು. ಸಿಎಂ ಸಿದ್ದರಾಮಯ್ಯ ವಿರುದ್ಧ ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣ ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಮಾಡಿತ್ತು. ನಂತರ ಲೋಕಾಯುಕ್ತ ವರದಿಗೆ ದೂರುದಾರ ಸ್ನೇಹಮಯಿ ಕೃಷ ತಕರಾರು ಸಲ್ಲಿಸಿದ್ದರು.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಲೋಕಾಯುಕ್ತ ವರದಿ ವಿರುದ್ಧ ತಕರಾರು ಅರ್ಜಿ ಸಲ್ಲಿಕೆ ಮಾಡಿದ್ದು, 39 ಪುಟಗಳ ಅಕರಾರು ಅರ್ಜಿಯಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದರು. ಅದರಲ್ಲಿನ ಅಂಶಗಳನ್ನು ಪರಿಗಣಿಸಿ ಸೂಕ್ತ ಆದೇಶ ನೀಡುವಂತೆ ಮನವಿ ಮಾಡಿದ್ದರು. ನಂತರ ಕೋರ್ಟ್ ಏ.15 ಕ್ಕೆ ಆದೇಶ ಕಾಯ್ದಿರಿಸಿತ್ತು.