ದೆಹಲಿ ಕ್ಯಾಂಟ್ ಮೆಟ್ರೋ ನಿಲ್ದಾಣದ ಬಳಿಯ ರಿಂಗ್ ರಸ್ತೆಯಲ್ಲಿ ಭಾನುವಾರ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದ ಪರಿಣಾಮ ಕೇಂದ್ರ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ನವಜೋತ್ ಸಿಂಗ್, ಬಾಂಗ್ಲಾ ಸಾಹಿಬ್ ಗುರುದ್ವಾರದಿಂದ ತಮ್ಮ ಬೈಕ್ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.
ನವತೋಜ್ ಸಿಂಗ್ ಅವರ ಪತ್ನಿ ಸಂದೀಪ್ ಕೌರ್ ಗಂಭೀರವಾಗಿ ಗಾಯಗೊಂಡಿದ್ದಾರೆ. “ನನ್ನ ಹೆತ್ತವರು ಬಾಂಗ್ಲಾ ಸಾಹಿಬ್ನಿಂದ ಹಿಂತಿರುಗುತ್ತಿದ್ದಾಗ ಅಪಘಾತಕ್ಕೀಡಾದರು. ಮತ್ತು ಯಾವುದೋ ಕಾರಣಕ್ಕಾಗಿ, ಅವರನ್ನು 17 ಕಿ.ಮೀ ದೂರದ ಜಿಟಿಬಿ ನಗರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನನ್ನ ತಂದೆ ಮೃತಪಟ್ಟಿದ್ದಾರೆ ಮತ್ತು ನನ್ನ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ” ಎಂದು ದಂಪತಿಯ ಮಗ ಹೇಳಿದರು.
ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದಾಗ ಮಹಿಳೆಯೊಬ್ಬರು ಕಾರನ್ನು ಚಾಲನೆ ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.”ಅಪಘಾತ ಸಂಭವಿಸಿದ ಕೂಡಲೇ, ಮಹಿಳೆ ಮತ್ತು ಆಕೆಯ ಜೊತೆಗಿದ್ದ ಆಕೆಯ ಪತಿ, ಗಾಯಗೊಂಡ ಇಬ್ಬರನ್ನು ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ಸಾಗಿಸಿದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.