ರಾಮನಗರ: ಕನ್ನಡ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 12ರ ಚಿತ್ರೀಕರಣ ಸ್ಥಗಿತಗೊಳಿಸಲಾಗಿದ್ದು, ಎಲ್ಲಾ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕರೆತರಲಾಗಿದೆ.
ಸಂಜೆ 6:30ಕ್ಕೆ ಶೋ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ‘ಬಿಗ್ ಬಾಸ್’ ಮನೆಯಿಂದ ಸ್ಪರ್ಧಿಗಳು ಹೊರಗೆ ಬಂದಿದ್ದಾರೆ. ಮಾಲಿನ್ಯ ನಿಯಂತ್ರಣ ನಿಯಮ ಉಲ್ಲಂಘನೆ ಕಾರಣಕ್ಕೆ ‘ಬಿಗ್ ಬಾಸ್’ ಶೋ ನಡೆಯುತ್ತಿದ್ದ ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಜಾಲಿವುಡ್ ಸ್ಟುಡಿಯೋ ಗೇಟ್ ಗೆ ಬೇಗ ಜಡಿಯಲಾಗಿದೆ. ‘ಬಿಗ್ ಬಾಸ್’ ಮನೆಗೂ ಅಧಿಕಾರಿಗಳು ಬೀಗ ಜಡಿದಿದ್ದು, ಎಲ್ಲಾ ಸ್ಪರ್ಧಿಗಳು ‘ಬಿಗ್ ಬಾಸ್’ ಮನೆಯಿಂದ ಹೊರಗೆ ಕರೆತಂದು ಸ್ಟುಡಿಯೋ ಆವರಣದಲ್ಲಿದ್ದ ಥಿಯೇಟರ್ ಗೆ ಕರೆತರಲಾಗಿದೆ. ನಂತರ ‘ಬಿಗ್ ಬಾಸ್’ ಸ್ಪರ್ಧಿಗಳನ್ನು ಬೇರೆ ಕಡೆಗೆ ವಾಹನಗಳಲ್ಲಿ ಕರೆದೊಯ್ಯಲಾಗಿದೆ.
‘ಬಿಗ್ ಬಾಸ್’ ಸ್ಟುಡಿಯೋ ಬಂದ್ ಮಾಡಲಾಗಿದೆ. ಚಿತ್ರೀಕರಣ ಸ್ಥಗಿತ ಮಾಡಿ ಎಲ್ಲಾ ಸ್ಪರ್ಧಿಗಳನ್ನು ಶಿಫ್ಟ್ ಮಾಡಲಾಗಿದೆ. ಅವರನ್ನು ಒಂದೆರಡು ದಿನ ಹೋಟೆಲ್ ನಲ್ಲಿ ಇರಿಸಿ ನಂತರ ಬೇರೆ ಸ್ಟುಡಿಯೋಗೆ ಸ್ಥಳಾಂತರಿಸಲಾಗುವುದು. ಬೇರೆ ಸ್ಟುಡಿಯೋದಲ್ಲಿ ‘ಬಿಗ್ ಬಾಸ್’ ಶೋ ಮತ್ತೆ ನಡೆಯಲಿದ್ದು, ಚಿತ್ರೀಕರಣ ಶುರುವಾಗಲಿದೆ ಎನ್ನಲಾಗಿದೆ.
