ಕಾರವಾರ: ಏರ್ ಗನ್ ನಿಂದ ಮಿಸ್ ಫೈರ್ ಆಗಿ ಬಾಲಕ ಕರಿಯಪ್ಪ ಸಾವನ್ನಪ್ಪಿದ ಪ್ರಕರಣಕ್ಕೆ ಶಿರಸಿ ಗ್ರಾಮಾಂತರ ಠಾಣೆ ಪೊಲೀಸರ ತನಿಖೆಯಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮೃತ ಬಾಲಕನ ಸಹೋದರನ ಕೈಯಿಂದ ಮಿಸ್ ಫೈರಿಂಗ್ ಆಗಿಲ್ಲ ಎನ್ನುವುದು ದೃಢಪಟ್ಟಿದೆ. ಕೆಲಸಗಾರ ನಿತೀಶ್ ಗೌಡ ಕೈಯಿಂದ ಮಿಸ್ ಫೈರ್ ಆಗಿ ಬಾಲಕ ಸಾವನ್ನಪ್ಪಿದ್ದಾನೆ ಎಂಬುದು ಶಿರಸಿ ಗ್ರಾಮಾಂತರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಪೊಲೀಸರು ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಿ ದೃಢಪಡಿಸಿದ್ದಾರೆ. ಮಕ್ಕಳಿಬ್ಬರು ಆಟವಾಡುತ್ತಾ ಏರ್ ಗನ್ ಹಿಡಿದುಕೊಂಡಿದ್ದ ನಿತೀಶ್ ಬಳಿಗೆ ಬಂದಿದ್ದಾರೆ. ವಿಶೇಷ ಚೇತನ ನಿತಿಶ್ ಗೌಡನಿಗೆ ಎಡಗೈ ಊನವಾಗಿತ್ತು. ಮಕ್ಕಳು ಬಂದ ಹಿನ್ನೆಲೆಯಲ್ಲಿ ಏರ್ ಗನ್ ಸರಿಸುವಾಗ ಎಡಗೈ ತಾಗಿತ್ತು. ಬಾಲಕ ಕರಿಯಪ್ಪ(9) ಮೃತಪಟ್ಟಿದ್ದ. ಗನ್ ಬಳಸುವ ಮಾಹಿತಿಯೇ ಇಲ್ಲದ ಕೆಲಸಗಾರ ನಿತೀಶ್ ಗೌಡ ಹಾಗೂ ಮನೆ ಮಾಲೀಕ ರಾಘವೇಂದ್ರ ಹೆಗಡೆ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಸೋಮನಹಳ್ಳಿಯ ರಾಘವೇಂದ್ರ ಹೆಗಡೆ ಎಂಬವರ ತೋಟದಲ್ಲಿ ಘಟನೆ ನಡೆದಿತ್ತು. ಮಂಗ ಓಡಿಸಲು ಬಳಸುವ ಏರ್ ಗನ್ ನಿಂದ ಗುಂಡು ಸಿಡಿದು ಅವಘಡ ಸಂಭವಿಸಿತ್ತು.