ಬೆಂಗಳೂರು: ಮಲೆನಾಡು, ಕರಾವಳಿಯಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ. ಅರಣ್ಯದಲ್ಲಿ ದನ, ಮೇಯಿಸುವುದನ್ನು ನಿಷೇಧಿಸಲು ಸೂಚನೆ ನೀಡಲಾಗಿದೆ.
ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ಅರಣ್ಯ ಪ್ರದೇಶದೊಳಗೆ ದನ, ಕರು, ಮೇಕೆ, ಹಾಗೂ ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಜಾನುವಾರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುವುದರಿಂದ ಆಗಷ್ಟೇ ಮೊಳಕೆಯೊಡೆದ ಸಸಿಗಳು ಸಾಕು ಪ್ರಾಣಿಗಳಿಗೆ ಆಹಾರವಾಗಿ ಅರಣ್ಯದಲ್ಲಿ ಹೊಸ ಗಿಡಗಳು ಬೆಳೆಯದೆ ಅರಣ್ಯ ಸಂವರ್ಧನೆಗೆ ಅಡ್ಡಿಯಾಗಿದೆ.
ಪರಿಸರ ಪ್ರೇಮಿಗಳು ಅರಣ್ಯ ವರ್ಧನೆಗೆ ಅಡ್ಡಿಯಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಸಾಕು ಪ್ರಾಣಿಗಳು ಕಾಡಿನಲ್ಲಿ ಮೇಯುವುದರಿಂದ ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳಿಗೂ ಮೇವಿನ ಕೊರತೆ ಉಂಟಾಗುತ್ತಿದೆ. ಮಿಗಿಲಾಗಿ ಊರಿನಿಂದ ಕಾಡಿಗೆ ಮೇಯಲು ಹೋಗುವ ಪ್ರಾಣಿಗಳಿಂದ ವನ್ಯಜೀವಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಅರಣ್ಯ ಸಂವರ್ಧನೆಯಾಗದಿದ್ದರೆ ನದಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಹೀಗಾಗಿ ಅರಣ್ಯ ಪ್ರದೇಶದಲ್ಲಿ ಜಾನುವಾರು ಮೇಯುವುದನ್ನು ನಿಷೇಧಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ.