ಬೆಂಗಳೂರು: ಉಸಿರಾಟ ತೊಂದರೆಯಿಂದಾಗಿ ಮಂಗಳವಾರ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬುಧವಾರ ಶಸ್ತ್ರಚಿಕಿತ್ಸೆ ಮೂಲಕ ಪೇಸ್ ಮೇಕರ್ ಅಳವಡಿಸಲಾಗಿದೆ. ಖರ್ಗೆಯವರ ಆರೋಗ್ಯ ಸ್ಥಿರವಾಗಿದ್ದು, ಗುರುವಾರ ತಡರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಅವರು ಶೀಘ್ರವೇ ಪಕ್ಷದ ಕೆಲಸ ಆರಂಭಿಸುವ ನಿರೀಕ್ಷೆ ಇದೆ. ದಿಢೀರ್ ಉಸಿರಾಟ ತೊಂದರೆಯಾಗಿದ್ದರಿಂದ ಮಂಗಳವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ತಪಾಸಣೆ ನಡೆಸಿದಾಗ ಹೃದಯ ಬಡಿತದಲ್ಲಿ ಏರುಪೇರು ಆಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಶಾಶ್ವತ ಪೇಸ್ ಮೇಕರ್ ಅಳವಡಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಖರ್ಗೆಯವರ ಆರೋಗ್ಯ ವಿಚಾರಿಸಿದ್ದಾರೆ. ಸಿಎಂ ಸಿದ್ಧರಾಮಯ್ಯ, ಸಚಿವ ಡಾ.ಜಿ. ಪರಮೇಶ್ವರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ವೈದ್ಯರು ಎರಡು ಮೂರು ದಿನ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.