BIG NEWS : ರಾಜ್ಯದ ಶಾಲೆಗಳಲ್ಲಿ 1 ನೇ ತರಗತಿ  ಪ್ರವೇಶಾತಿಗೆ ವಯೋಮಿತಿ ಸಡಿಲಿಕೆ : ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ.!

ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ 1 ನೇ ತರಗತಿ ಪ್ರವೇಶಾತಿಗೆ ವಯೋಮಿತಿ ಸಡಿಲಿಕೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಕ್ರಮಾಂಕ(1)ರ ಆದೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ(2)ರ ತಿದ್ದುಪಡಿ ಆದೇಶದಲ್ಲಿ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿರುವುದನ್ನು 2025-2026ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ತಿದ್ದುಪಡಿ ಮಾಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ(3)ರ ಏಕ ಕಡತದಲ್ಲಿ ಒಂದನೇ ತರಗತಿ ಪ್ರವೇಶಾತಿಗೆ ಪ್ರಸ್ತುತ ನಿಗದಿಪಡಿಸಿರುವ ಕನಿಷ್ಠ 6 ವರ್ಷಗಳ ವಯೋಮಿತಿಯನ್ನು ಸಡಿಲಿಸಲು ರಾಜ್ಯಾದ್ಯಂತ ಪೋಷಕರಿಂದ ಹಲವಾರು ಮನವಿಗಳು ಸ್ವೀಕೃತವಾಗುತ್ತಿದ್ದು, ಒಂದನೇ ತರಗತಿಗೆ 5 ವರ್ಷ 5 ತಿಂಗಳು ವಯೋಮಿತಿಯನ್ನು ಮರುನಿಗದಿಗೊಳಿಸಲು ಸರ್ಕಾರದ ಹಂತದಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮಾಂಕ(4)ರ ಪತ್ರದಲ್ಲಿ ಒಂದನೇ ತರಗತಿಯ ಪ್ರವೇಶಾತಿಗೆ ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸುವುದು ರಾಜ್ಯ ಶಿಕ್ಷಣ ನೀತಿಯ ಚೌಕಟ್ಟಿಗೆ ಒಳಪಟ್ಟಿರುವುದರಿಂದ ಈ ಕುರಿತು ಕೂಲಂಕಷವಾಗಿ ಪರಿಶೀಲಿಸಿ ಸಲಹೆ ನೀಡುವಂತೆ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ಕೋರಲಾಗಿತ್ತು.

ಮೇಲೆ ಓದಲಾದ ಕ್ರಮಾಂಕ(5)ರ ಪತ್ರದಲ್ಲಿ “ರಾಜ್ಯ ಶಿಕ್ಷಣ ನೀತಿ ಆಯೋಗವು ಸಂವಿಧಾನದ ಅನುಚ್ಛೇದ 21(ಎ), ಶಿಕ್ಷಣ ಹಕ್ಕು ಕಾಯ್ದೆ-2009, ಕಡ್ಡಾಯ ಶಿಕ್ಷಣ ನಿಯಮಗಳು-2012 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಸಾರ ಒಂದನೇಯ ತರಗತಿಯ ಪ್ರವೇಶಕ್ಕೆ ಆರು ವರ್ಷಗಳ ಕನಿಷ್ಠ ವಯೋಮಿತಿ ನಿಗದಿಪಡಿಸಿರುವುದು ಅಗತ್ಯ ಮತ್ತು ಔಚಿತ್ಯಪೂರ್ಣ ಎಂಬುದನ್ನು ಸ್ಪಷ್ಟಪಡಿಸಿರುತ್ತದೆ.

ಮುಂದುವರೆದು, ಈ ವಿಷಯದಲ್ಲಿ ಅನುಸರಿಸಲಾಗುತ್ತಿರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪದ್ಧತಿಗಳು (PRACTICES), ಮಗುವಿನ ಮಾನಸಿಕ ಬೆಳವಣಿಗೆ ಮತ್ತು ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಒಂದನೇ ತರಗತಿಯ ದಾಖಲಾತಿಗೆ ಆರು ವರ್ಷಗಳ ಕನಿಷ್ಠ ವಯೋಮಿತಿ ನಿಗದಿಪಡಿಸಿರುವುದು ಹಾಗೂ ಮಗುವಿನ ಒತ್ತಡರಹಿತ ಕಲಿಕೆಗೆ ಪೂರಕವಾಗಿ ರಾಜ್ಯ ಸರ್ಕಾರವು ನಿಗದಿಪಡಿಸಿರುವ ಆರು ವರ್ಷಗಳ ಕನಿಷ್ಠ ವಯೋಮಿತಿ ಸಮರ್ಪಕವಾಗಿರುತ್ತದೆ ಎಂದು ಅಭಿಪ್ರಾಯಿಸಿರುತ್ತದೆ. ವೈಯಕ್ತಿಕ ತೊಡಕಗಳನ್ನು ಪರಿಗಣಿಸಿ ಶಿಕ್ಷಣ ನೀತಿಯಲ್ಲಿ ಬದಲಾವಣೆ ಮಾಡಲಾಗದು ಎಂದು ಮತ್ತು ವಿವಿಧ ನ್ಯಾಯಾಲಯಗಳು ಈ ಅಂಶವನ್ನು ಎತ್ತಿ ಹಿಡಿದಿರುವುದಾಗಿ ವರದಿಯಲ್ಲಿ ತಿಳಿಸಿರುತ್ತಾರೆ.

ಆದಾಗ್ಯೂ, 2025-2026ರ ಶೈಕ್ಷಣಿಕ ವರ್ಷಕ್ಕಿಂತ ಪೂರ್ವದಲ್ಲಿ ಪೂರ್ವ ಪ್ರಾಥಮಿಕ ತರಗತಿ ಪೂರ್ಣಗೊಳಿಸಿರುವ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ನಿಗದಿಪಡಿಸಿರುವ ಆರು ವರ್ಷಗಳ ಕನಿಷ್ಠ ವಯೋಮಿತಿಗೆ 2025-2026ನೇ ಶೈಕ್ಷಣಿಕ ಸಾಲಿಗೆ ಮಾತ್ರ ಸೀಮಿತಗೊಳಿಸಿ ವಿನಾಯಿತಿ ನೀಡಬಹುದೆಂದು ಅಭಿಪ್ರಾಯ ನೀಡಿರುತ್ತದೆ”. ಆಯುಕ್ತರಿಂದ ಸ್ವೀಕೃತವಾಗಿರುವ ಏಕ ಕಡತದಲ್ಲಿನ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ರಾಜ್ಯ ಶಿಕ್ಷಣ ನೀತಿ ಆಯೋಗವು ಮಾಡಿರುವ ಶಿಫಾರಸ್ಸುಗಳನ್ನು ಪರಿಗಣಿಸಿ 2025-26ನೇ ಶೈಕ್ಷಣಿಕ ಸಾಲಿಗೆ ಮಾತ್ರ ಅನ್ವಯವಾಗುವಂತೆ ಉಲ್ಲೇಖಿಸಿರುವ ಕಾರಣಗಳಿಂದ ಒಂದನೇ ತರಗತಿಗೆ ದಾಖಲು ಮಾಡಲು ನಿಗದಿಪಡಿಸಿರುವ 6 ವರ್ಷಗಳ ವಯೋಮಿತಿಗೆ ಸಡಿಲಿಕೆಯನ್ನು ನೀಡಲು, ಅಂದರೆ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಹಾಗೂ ಜೂನ್ 1ನೇ ತಾರೀಖಿಗೆ 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು ನಿರ್ಧರಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯ ಶಿಕ್ಷಣ ನೀತಿ ಆಯೋಗದ ಶಿಫಾರಸ್ಸು/ಅಭಿಪ್ರಾಯವನ್ನು ಪರಿಗಣಿಸಿ ಸರ್ಕಾರದ ಆದೇಶ ಸಂಖ್ಯೆ: ಇಪಿ 260 ಪಿಜಿಸಿ 2021, ದಿನಾಂಕ:26.07.2022ರಲ್ಲಿ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿರುವುದಕ್ಕೆ ಒಂದು ಬಾರಿಯ ಕ್ರಮವಾಗಿ ಸಡಿಲಿಕೆಯನ್ನು ನೀಡಿ ಉಲ್ಲೇಖಿಸಿರುವ ಕಾರಣಗಳಿಂದ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಹಾಗೂ ಜೂನ್ 1ನೇ ತಾರೀಖಿಗೆ 5 ವರ್ಷ 5 ತಿಂಗಳು ಪೂರ್ಣಗೊಂಡಿರುವ ಮಕ್ಕಳನ್ನು 2025-2026ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಒಂದನೇ ತರಗತಿಗೆ ದಾಖಲು ಮಾಡಿಕೊಳ್ಳಲು ಆದೇಶಿಸಿದೆ.

ಮುಂದುವರೆದು, 2026-27ನೇ ಶೈಕ್ಷಣಿಕ ವರ್ಷದಿಂದ ಜೂನ್ ಒಂದನೇ ತಾರೀಖಿಗೆ 06 ವರ್ಷಗಳು ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ಒಂದನೇ ತರಗತಿಗೆ ದಾಖಲಿಸಿಕೊಳ್ಳತಕ್ಕದ್ದು ಮತ್ತು ಸರ್ಕಾರದ ಆದೇಶ ಸಂಖ್ಯೆ: ಇಪಿ 100 ಪಿಜಿಸಿ 2024, ದಿನಾಂಕ:26.06.2024ರಲ್ಲಿ ಈಗಾಗಲೇ ಎಲ್.ಕೆ.ಜಿ ಪ್ರವೇಶಾತಿಗೆ 4 ವರ್ಷ ಮತ್ತು ಯು.ಕೆ.ಜಿ ಪ್ರವೇಶಾತಿಗೆ 5 ವರ್ಷಗಳ ಕನಿಷ್ಠ ವಯೋಮಿತಿ ನಿಗದಿಪಡಿಸಲಾಗಿರುತ್ತದೆ. ಅದರಂತೆ 2025-2026ನೇ ಶೈಕ್ಷಣಿಕ ವರ್ಷದಿಂದ ಎಲ್.ಕೆ.ಜಿ ಅಥವಾ ತತ್ಸಮಾನ ದಾಖಲಾತಿಗೆ 4 ವರ್ಷ ಪೂರ್ಣಗೊಂಡಿರುವ ಮತ್ತು ಯು.ಕೆ.ಜಿ ಅಥವಾ ತತ್ಸಮಾನ ದಾಖಲಾತಿಗೆ 5 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳತಕ್ಕದ್ದು.ಈ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಮತ್ತು ಅವರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ ಮತ್ತು ಧಾರವಾಡ ಇವರಿಗೆ ಆದೇಶಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read