ವಿಜಯಪುರ: ನಟ, ರಂಗಕರ್ಮಿ ಕಲಿಯುಗದ ಕುಡುಕ ಖ್ಯಾತಿಯ ರಾಜು ತಾಳಿಕೋಟೆ(59) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಅವರು ಖಾಸ್ಗತೇಶ್ವರ ನಾಟಕ ಮಂಡಳಿ ಮಾಲೀಕರಾಗಿದ್ದರು. ನಟ ಹಾಗೂ ರಂಗಕರ್ಮಿ ರಾಜು ತಾಳಿಕೋಟೆ ಧಾರವಾಡದ ರಂಗಾಯಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕಲಿಯುಗದ ಕುಡುಕ, ಕುಡುಕರ ಸಾಮ್ರಾಜ್ಯದ ಅಸಲಿ ಕುಡುಕ ನಾಟಕಗಳು, ಪ್ರಮುಖ ನಾಟಕಗಳ ಆಡಿಯೋ ಕ್ಯಾಸೆಟ್ ಬಿಡುಗಡೆ ಮಾಡಿದ್ದರು. ಮನಸಾರೆ, ಪಂಚರಂಗಿ, ಮತ್ತೊಂದ್ ಮದುವೇನಾ..!, ಮೈನಾ ಸೇರಿದಂತೆ ಹಲವು ಚಿತ್ರಗಳಲ್ಲಿ ರಾಜು ತಾಳಿಕೋಟೆ ಅಭಿನಯಿಸಿದ್ದಾರೆ. ಅವರ ಪೂರ್ಣ ಹೆಸರು ರಾಜೇಸಾಬ ಮುಕ್ತಂಸಾಬ ತಾಳಿಕೋಟೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ನಿವಾಸಿಯಾಗಿದ್ದ ಅವರು ಪ್ರಸ್ತುತ ವಿಜಯಪುರ ಜಿಲ್ಲೆ ತಾಳಿಕೋಟೆಯಲ್ಲಿ ನೆಲೆಸಿದ್ದರು.
ಸಿನಿಮಾ ಚಿತ್ರೀಕರಣಕ್ಕೆ ಬಂದಿದ್ದ ವೇಳೆಯಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ನಟ ಶೈನ್ ಶೆಟ್ಟಿ ಅಭಿನಯದ ಸಿನಿಮಾದಲ್ಲಿ ರಾಜು ತಾಳಿಕೋಟೆ ಕೂಡ ನಟಿಸುತ್ತಿದ್ದರು. ಚಿತ್ರೀಕರಣಕ್ಕಾಗಿ ಬಂದ ವೇಳೆಯಲ್ಲಿ ಹೃದಯಾಘಾತಕ್ಕೆ ಒಳಗಾದ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ 5.30ರ ಸುಮಾರಿಗೆ ರಾಜು ತಾಳಿಕೋಟೆ ಕೊನೆಯುಸಿರೆಳೆದಿದ್ದಾರೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ.