ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ನಲ್ಲಿ ಆರೋಪಿತ ವ್ಯಕ್ತಿ ದೀಪಕ್ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯರೇ ಆಗಿರುವ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಹತ್ಯೆ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮಂಗಳವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹಿಮಾನ್ ಅವರ ಅಂತ್ಯಕ್ರಿಯೆ ಕುರಿಯಾಳ ಗ್ರಾಮದ ಇರಾಕೋಡಿಯ ಮಸೀದಿಯ ಆವರಣದಲ್ಲಿ ಬುಧವಾರ ನಡೆಯಿತು. ಕುತ್ತಾರ್ ಮದನಿ ನಗರದ ಮಸೀದಿಯಲ್ಲಿ ಪ್ರಾಥಮಿಕ ವಿಧಿ ವಿಧಾನ ಪೂರೈಸಿದ ನಂತರ ಮೃತದೇಹವನ್ನು ಅವರ ನಿವಾಸಕ್ಕೆ ಕೊಂಡಲಾಯಿತು. ಈ ವೇಳೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.