ಹಾಸನ: ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಚಿಕ್ಕಮ್ಮನವರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ಹಾಸನ ಜಿಲ್ಲೆ ಬೇಲೂರಿನ ನೆಹರು ನಗರದಲ್ಲಿ ನಡೆದಿದೆ.
ಶಿಕ್ಷಕಿ ಚಿಕ್ಕಮ್ಮನವರ ಮುಖ, ಕೈಕಾಲಿಗೆ ಬೀದಿ ನಾಯಿಗಳು ಕಚ್ಚಿವೆ. ಚಿಕ್ಕಮ್ಮ ಬೇಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಆಗಿದ್ದಾರೆ. ನಾಯಿಗಳಿಂದ ಶಿಕ್ಷಕಿಯನ್ನು ರಕ್ಷಿಸಲು ಪತಿ ಶಿವಕುಮಾರ್ ಮುಂದಾಗಿದ್ದರು. ಶಿವಕುಮಾರ್ ಸೇರಿದಂತೆ 7 ಜನರಿಗೆ ನಾಯಿಗಳು ಕಚ್ಚಿವೆ.
ಶಿಕ್ಷಕಿ ಚಿಕ್ಕಮ್ಮ ಅವರಿಗೆ ನೀಡಿದ ಸಮೀಕ್ಷೆ ಅವಧಿ ಇಂದು ಕೊನೆಯದಾಗಿತ್ತು. ಅವರಿಗೆ ನೀಡಿದ ಮನೆಗಳ ಪೈಕಿ ಮೂರು ಮನೆಗಳ ಸಮೀಕ್ಷೆ ಬಾಕಿ ಉಳಿದಿದ್ದು, ನವೀನ್ ಎಂಬುವವರ ಮನೆಗೆ ಸಮೀಕ್ಷೆಗೆ ಚಿಕ್ಕಮ್ಮ ತೆರಳಿದ್ದ ವೇಳೆ ಅವರ ಮೇಲೆ 10ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿವೆ. ಪತ್ನಿ ರಕ್ಷಿಸಲು ಮುಂದಾದ ಪತಿ ಶಿವಕುಮಾರ್ ಅವರಿಗೂ ನಾಯಿಗಳು ಕಚ್ಚಿವೆ. ಶಿಕ್ಷಕಿ ಚಿಕ್ಕಮ್ಮ ಮತ್ತು ಅವರ ಪತಿ ಶಿವಕುಮಾರ್ ಅವರ ರಕ್ಷಣೆಗೆ ಮುಂದಾಗಿದ್ದ ಧರ್ಮ, ಪೃಥ್ವಿ, ಸಚಿನ್ ಸೇರಿದಂತೆ 7 ಜನರಿಗೂ ನಾಯಿಗಳು ಕಚ್ಚಿವೆ. ಅಲ್ಲೇ ಆಟವಾಡುತ್ತಿದ್ದ ಬಾಲಕ ಕಿಶನ್ ಗೂ ನಾಯಿಗಳು ಕಚ್ಚಿವೆ.
ತಾಲೂಕು ಆಸ್ಪತ್ರೆಯಲ್ಲಿ ಶಿಕ್ಷಕಿ ಸೇರಿ ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.