ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಸಜಾಬಂಧಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೈದಿ ಸಂಖ್ಯೆ 15528 ನೀಡಲಾಗಿದೆ. ಅವರು ಇಂದಿನಿಂದ ಜೈಲಿನಲ್ಲಿ ಕೈದಿ ಸಮವಸ್ತ್ರವನ್ನು ಧರಿಸಬೇಕಿದೆ.
ಜೈಲಿನ ಸಜಾಬಂಧಿ ಕೈದಿಗಳ ನಿಯಮಗಳನ್ನು ಪ್ರಜ್ವಲ್ ರೇವಣ್ಣ ಪಾಲಿಸಬೇಕಿದೆ. ನಿಯಮದ ಪ್ರಕಾರ ಜೈಲು ಅಧೀಕ್ಷಕರು ನೀಡುವ ಕೆಲಸ ಮಾಡಬೇಕು. ಇಂದು ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನ ಸಿಬ್ಬಂದಿ ಬಿಳಿ ಸಮವಸ್ತ್ರ ಕೊಡಲಿದ್ದಾರೆ. ಅಪರಾಧಿ ಪ್ರಜ್ವಲ್ ರೇವಣ್ಣ ಅವರನ್ನು ಸಜಾಬಂಧಿ ಸೆಲ್ ಗೆ ಶಿಫ್ಟ್ ಮಾಡಲಾಗಿದೆ.
ಜೈಲಿನೊಳಗೆ ಪ್ರಜ್ವಲ್ ರೇವಣ್ಣ ಎಂಟು ಗಂಟೆ ಕೆಲಸ ಮಾಡಬೇಕು. ಕರಕುಶಲ ವಸ್ತು, ಮರ ಕೆಲಸ ಸೇರಿ ಯಾವುದಾದರೂ ಒಂದು ಕೆಲಸ ಆಯ್ಕೆ ಮಾಡಿಕೊಳ್ಳಬೇಕಿದೆ. ಪ್ರಜ್ವಲ್ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಪಾವತಿಸಲಾಗುವುದು. ಮೊದಲು ಒಂದು ವರ್ಷ ಕೌಶಲ್ಯ ರಹಿತ ಎಂದು 524 ರೂ. ಸಂಬಳ ನೀಡಲಾಗುತ್ತದೆ. ಆಮೇಲೆ ಅರೆ ಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತದೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಅಧಿಕಾರಿಗಳು ಭರ್ತಿ ನೀಡಲಿದ್ದಾರೆ.
ಇಷ್ಟು ದಿನ ವಿಚಾರಣಾ ಕೈದಿಯಾಗಿದ್ದ ಪ್ರಜ್ವಲ್ ರೇವಣ್ಣ ನಿನ್ನೆಯಿಂದ ಸಜಾಬಂಧಿಯಾಗಿದ್ದಾರೆ. ಇಂದಿನಿಂದ ಪ್ರಜ್ವಲ್ ರೇವಣ್ಣ ಜೀವನಶೈಲಿ ಬದಲಾಗಲಿದೆ.