ಬೆಂಗಳೂರು: ಮಲೆಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ 5 ಹುಲಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಫ್ಎಸ್ ಅಧಿಕಾರಿ ಚಕ್ರಪಾಣಿ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಆಗಿದ್ದ ಚಕ್ರಪಾಣಿ ಪಾಣಿ ಅವರನ್ನು ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. ಚಕ್ರಪಾಣಿ ಕರ್ತವ್ಯ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಡಿಸಿಎಫ್ ಆಗಿದ್ದ ಚಕ್ರಪಾಣಿ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಐದು ಹುಲಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಹೆಗಡೆ, ಉಪವಲಯ ಅರಣ್ಯ ಅಧಿಕಾರಿ ಮಾದೇಶ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು. ರಾಜ್ಯ ಸರ್ಕಾರದ ಜೊತೆಗೆ ಕೇಂದ್ರದಿಂದಲೂ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿತ್ತು.
ಜೂನ್ 23ರಂದು ವಿಷಪ್ರಾಶನದಿಂದ ಐದು ಹುಲಿಗಳು ಮೃತಪಟ್ಟಿದ್ದವು. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಡಿಸಿಎಫ್ ಕಚೇರಿ ಎದುರು ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಜೂನ್ 23ರಂದು ಹಸು ಕೊಂದಿದ್ದ ಹುಲಿ ಮೇಲೆ ಪ್ರತೀಕಾರಕ್ಕೆ ವಿಷ ಹಾಕಲಾಗಿತ್ತು. ಹಸು ಮೃತದೇಹದ ಮೇಲೆ ದುಷ್ಕರ್ಮಿಗಳು ಕೀಟನಾಶಕ ಸಿಂಪಡಿಸಿದ್ದರು. ಹಸುವಿನ ಮಾಂಸ ತಿಂದು ತಾಯಿ ಹುಲಿ ಹಾಗೂ 4 ಮರಿಗಳು ಮೃತಪಟ್ಟಿದ್ದವು.
ಜೂನ್ 26ರಂದು ಐದು ಹುಲಿಗಳ ಸಾವಿನ ಪ್ರಕರಣ ಬಹಿರಂಗವಾಗಿತ್ತು. ಪ್ರಕರಣದಲ್ಲಿ ಮಾದರಾಜು, ನಾಗರಾಜು, ಕೋನಪ್ಪ ಜೈಲು ಪಾಲಾಗಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಡಿಸಿಎಫ್ ಚಕ್ರಪಾಣಿಯವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.