ಬೆಂಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಿರು ವಿಮಾನ ನಿಲ್ದಾಣ(ಏರ್ ಸ್ಟ್ರಿಪ್) ನಿರ್ಮಿಸುವ ಸಂಬಂಧ ಇಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಇಂಧನ ಸಚಿವರೂ ಆದ ಕೆ.ಜೆ. ಜಾರ್ಜ್ ಅವರೊಂದಿಗೆ ವಾಣಿಜ್ಯ ಮತ್ತು ಕೈಗಾರಿಕೆಗಳು, ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಮಹತ್ವದ ಮಾತುಕತೆ ನಡೆಸಿದ್ದಾರೆ.
ಚಿಕ್ಕಮಗಳೂರು ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಪರಿಹಾರ ನೀಡುವುದು ಬಾಕಿ ಇದ್ದು, ಅದರ ಕಡತವನ್ನು ಸಂಪುಟ ಸಭೆಗೆ ಮಂಡಿಸಲು ತೀರ್ಮಾನ ಮಾಡಲಾಯಿತು.
2023-24ರ ಬಜೆಟ್ ನಲ್ಲಿ ಘೋಷಿಸಿದ್ದ ಚಿಕ್ಕಮಗಳೂರು ಮತ್ತು ಕೊಡಗು ಕಿರು ವಿಮಾನ ನಿಲ್ದಾಣ(ಏರ್ ಸ್ಟ್ರಿಪ್) ಏರ್-ಸ್ಟ್ರಿಪ್ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಸಚಿವ ಜಾರ್ಜ್ ಅವರ ಜತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಇಂದು ವಿಧಾನಸೌಧದಲ್ಲಿ ಸಭೆ ನಡೆಸಿ, ಸೂಕ್ತ ಆದೇಶ ನೀಡಲಾಯಿತು ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಚಿಕ್ಕಮಗಳೂರು ಏರ್-ಸ್ಟ್ರಿಪ್ ಯೋಜನೆಗೆ ಅಲ್ಲಿನ ಜಿಲ್ಲಾಡಳಿತವು ಚಿಕ್ಕಮಗಳೂರು-ಹಿರೇಮಗಳೂರು ನಡುವೆ ಈಗಾಗಲೇ 137 ಎಕರೆ ಜಮೀನು ನೀಡಿದೆ. ಈ ಪೈಕಿ 120 ಎಕರೆ ಸರ್ಕಾರಿ ಜಮೀನೇ ಆಗಿದೆ. ಉಳಿದ 17.1 ಎಕರೆ ಮಾತ್ರ ಖಾಸಗಿಯಾಗಿದ್ದು, ಇದರ ಸ್ವಾಧೀನ ಬಾಕಿ ಇದೆ. ಇದಕ್ಕೆ 24.6 ಕೋಟಿ ರೂ. ವೆಚ್ಚವಾಗಲಿದ್ದು, ಈಗಾಗಲೇ 7 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಉಳಿದಿರುವ 17.6 ಕೋಟಿ ರೂ.ಗಳ ಬಿಡುಗಡೆ ಬಾಕಿ ಇದ್ದು, ತ್ವರಿತ ಬಿಡುಗಡೆ ಮಾಡುವ ಉದ್ದೇಶದಿಂದ ಪ್ರಸ್ತಾವನೆಯನ್ನು ಮುಂಬರುವ ಸಚಿವ ಸಂಪುಟ ಸಭೆಗೆ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಉದ್ದೇಶಿತ ಏರ್-ಸ್ಟ್ರಿಪ್ ನಲ್ಲೇ ಹೆಲಿಪೋರ್ಟ್ ಕೂಡ ಅಭಿವೃದ್ಧಿಪಡಿಸಲಾಗುವುದು. ಜತೆಗೆ ಮುಂಬರುವ ದಿನಗಳಲ್ಲಿ ಬೃಹತ್ ವಿಮಾನಗಳ ಪ್ರಯಾಣಕ್ಕೂ ಅನುಕೂಲವಾಗುವ ಹಾಗೆ ನಿಲ್ದಾಣ ಅಭಿವೃದ್ಧಿ ಪಡಿಸುವ ಉದ್ದೇಶ ಇಟ್ಟುಕೊಳ್ಳಬೇಕು.ಇದಕ್ಕೆ ಕೆಎಸ್ಐಐಡಿಸಿ ವತಿಯಿಂದ ಪರಿಣತರ ತಂಡವನ್ನು ಕಳಿಸಲಾಗುವುದು.
ಇದೇ ರೀತಿಯಲ್ಲಿ ಕೊಡಗಿನಲ್ಲಿ ಏರ್-ಸ್ಟ್ರಿಪ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮಸ್ಯೆ ತಲೆದೋರಿದೆ. ಇದನ್ನು ಆದಷ್ಟು ಬೇಗ ಬಗೆಹರಿಸಿ, ಜಾಗವನ್ನು ಗುರುತಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಎನ್ ಮಂಜುಳಾ, KSIIDC ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್, KIADB ಸಿಇಒ ಡಾ.ಮಹೇಶ ಅವರು ಸಭೆಯಲ್ಲಿ ಹಾಜರಿದ್ದರು. ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ವರ್ಚುಯಲ್ ರೂಪದಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.