ಬೆಂಗಳೂರು: ತನ್ನ ಸ್ನೇಹಿತನೊಂದಿಗೆ ಇರುವ ಖಾಸಗಿ ವಿಡಿಯೋ ಬಳಸಿಕೊಂಡು ಯುವತಿಗೆ 5 ಲಕ್ಷ ರೂ. ನೀಡುವಂತೆ ಬ್ಲಾಕ್ಮೇಲ್ ಮಾಡಿದ ಆರೋಪದಡಿ ಕಿಡಿಗೇಡಿಯೊಬ್ಬನ ವಿರುದ್ಧ ಬೆಂಗಳೂರು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಹೆಚ್ಇಎಲ್ ಲೇಔಟ್ ನಿವಾಸಿಯಾಗಿರುವ 25 ವರ್ಷದ ಯುವತಿ ದೂರು ನೀಡಿದ್ದು, ಅಪರಿಚಿತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಿಎನ್ಎಸ್ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಯುವತಿ ತನ್ನ ಸ್ನೇಹಿತನ ಜೊತೆಗಿರುವ ಖಾಸಗಿ ವಿಡಿಯೋ ಬಳಸಿಕೊಂಡ ಅಪರಿಚಿತ ವ್ಯಕ್ತಿ ವಿಡಿಯೋ ಕರೆ ಮತ್ತು ಸಂದೇಶಗಳ ಮೂಲಕ 5 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದರೆ ವಿಡಿಯೋವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದ್ದು, ಇದರಿಂದ ಕಂಗಾಲದ ಯುವತಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.