ಸಿದ್ಧಾರ್ಥನಗರ (ಉತ್ತರ ಪ್ರದೇಶ): ‘ಆಕ್ಷೇಪಾರ್ಹ’ ವಿಡಿಯೋ ಕಾಣಿಸಿಕೊಂಡ ನಂತರ ಉತ್ತರ ಪ್ರದೇಶದ ಬಿಜೆಪಿ ನಾಯಕನನ್ನು ಪಕ್ಷದಿಂದ ಹೊರಹಾಕಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹದಿಹರೆಯದ ಹುಡುಗಿಯೊಬ್ಬಳನ್ನು ಒಳಗೊಂಡ ಆಕ್ಷೇಪಾರ್ಹ ವಿಡಿಯೋ ಕಾಣಿಸಿಕೊಂಡ ನಂತರ ಸಿದ್ಧಾರ್ಥನಗರದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಆದಾಗ್ಯೂ, ಉಚ್ಚಾಟಿತ ನಾಯಕ ಗೌರಿಶಂಕರ್ ಅಗ್ರಹಾರಿ ಈ ವಿಡಿಯೋವನ್ನು “ದೋಷಪೂರಿತ ಮತ್ತು ರಾಜಕೀಯ ಪ್ರೇರಿತ” ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.
ಸುಮಾರು ಒಂದು ವಾರದಷ್ಟು ಹಳೆಯದು ಎಂದು ಹೇಳಲಾದ ವಿಡಿಯೋದಲ್ಲಿ, ಬನ್ಸಿ ತೆಹಸಿಲ್ ಪ್ರದೇಶದ ಕೋಣೆಯೊಳಗೆ ಅಗ್ರಹಾರಿ ಹುಡುಗಿಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡಿದ್ದಾರೆ ಎಂದು ಬನ್ಸಿ ವೃತ್ತ ಅಧಿಕಾರಿ ಮಾಯಾಂಕ್ ತ್ರಿಪಾಠಿ ಹೇಳಿದ್ದು, ಈ ವಿಡಿಯೋ ಗಮನಕ್ಕೆ ಬಂದಿದೆ. ತನಿಖೆ ನಡೆಸಲಾಗುತ್ತಿದೆ. ಬಾಲಕಿ ಅಪ್ರಾಪ್ತ ವಯಸ್ಕಳೆಂದು ಕಂಡುಬಂದರೆ, ಸಂಬಂಧಿತ ಕಾನೂನಿನ ವಿಭಾಗಗಳ ಅಡಿಯಲ್ಲಿ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ್ ಶುಕ್ಲಾ ಅವರು ಉಚ್ಚಾಟನಾ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧ್ಯಕ್ಷರ ದೂರು ಮತ್ತು ನಂತರ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿದ ನಂತರ ಪಕ್ಷದ ರಾಜ್ಯ ನಾಯಕತ್ವದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.