ಪಂಜಾಬ್ ನಲ್ಲಿ ಧರ್ಮಸ್ಥಳ ಮೂಲದ ಯುವತಿ, ಏರೋಸ್ಪೇಸ್ ಉದ್ಯೋಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಪ್ರೇಮ ವೈಫಲ್ಯದಿಂದ ಆಕಾಂಕ್ಷ ಕಟ್ಟಡದಿಂದ ಜಿಗಿದು ಸೂಸೈಡ್ ಮಾಡಿಕೊಂಡಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಆಕಾಂಕ್ಷಾ ಪಗ್ವಾಡ ಕಾಲೇಜಿನ ಪ್ರೊ. ಮ್ಯಾಥ್ಯೂ ಅವರನ್ನು ಪ್ರೀತಿಸುತ್ತಿದ್ದರು. ಯಾವುದೋ ಕಾರಣಕ್ಕೆ ಪ್ರೀತಿ ಮುರಿದು ಬಿದ್ದಿದೆ. ಕಾಲೇಜಿಗೆ ಸರ್ಟಿಫಿಕೇಟ್ ತರಲು ಹೋದಾಗ ಈ ವಿಚಾರಕ್ಕೆ ಪ್ರೊ. ಮ್ಯಾಥ್ಯೂ ಜೊತೆ ಆಕಾಂಕ್ಷ ಗಲಾಟೆ ಮಾಡಿದ್ದಾರೆ. ನಂತರ ಮನನೊಂದು ಕಾಲೇಜಿನ ಕಟ್ಟಡದಿಂದ ಜಿಗಿದು ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ, ಪ್ರೊ ಮ್ಯಾಥ್ಯೂ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಏರೋಸ್ಪೇಸ್ ನ ಉದ್ಯೋಗಿ ಆಕಾಂಕ್ಷಾ ಎಸ್.ನಾಯರ್ (22) ಮೃತ ಯುವತಿ. 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಆಕಾಂಕ್ಷಾ ಕಾಲೇಜು ಸರ್ಟಿಫಿಕೇಟ್ ತರಲೆಂದು ಪಂಜಾಬ್ ಗೆ ತೆರಳಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಆಕಾಂಕ್ಷಾ ನಾಯರ್ ಪಂಜಾಬ್ ನ ಎಲ್.ಸಿ.ಯು ಪಗ್ವಾಡ ಕಾಲೇಜಿನಲ್ಲಿ ಓದಿದ್ದರು. ಈ ಹಿನ್ನೆಲೆಯಲ್ಲಿ ಸರ್ಟಿಫಿಕೇಟ್ ತರಲೆಂದು ಹೋಗಿದ್ದರು. ಉದ್ಯೋಗಕ್ಕಾಗಿ ಜಪಾನ್ ಗೆ ತೆರಳಲು ಆಕಾಂಕ್ಷಾ ಪ್ಲಾನ್ ಮಾಡಿದ್ದರು. ಇದಕ್ಕಾಗಿ ಸರ್ಟಿಫಿಕೇಟ್ ಗಾಗಿ ಪಂಜಾಬ್ ಪಗ್ವಾಡಾ ಕಾಲೇಜಿಗೆ ಹೋಗಿ ಸರ್ಟಿಫಿಕೇಟ್ ಪಡೆದಿದ್ದರು.
ಸರ್ಟಿಫಿಕೇಟ್ ಪಡೆದ ಬಳಿಕ ಮನೆಗೆ ಕರೆ ಮಾಡಿದ್ದ ಆಕಾಂಕ್ಷಾ ಆ ಬಳಿಕ ನಿಗೂಢವಾಗಿ ಸಾವನ್ನಪ್ಪಿದ್ದರು. ಮಗಳ ಸಾವಿನ ಬಗ್ಗೆ ಜಲಂಧರ್ ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದರು.3ನೇ ಮಹಡಿಯಿಂದ ಬಿದ್ದು ಆಕಾಂಕ್ಷಾ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆಯೇ ಆಕಾಂಕ್ಷಾ ಪೋಷಕರು ಪಂಜಾಬ್ ಗೆ ತೆರಳಿದ್ದಾರೆ.ಆಕಾಂಕ್ಷಾ ತಂದೆ ಮಗಳ ಸಾವು ಕೊಲೆಯಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.