ಬೆಂಗಳೂರು: ಸುಳ್ಳು ಮಾಹಿತಿ ನೀಡಿ ಅನರ್ಹರು ಪಡೆದಿದ್ದ 2.50 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಕಾರ್ಡ್ ಗಳಾಗಿ ಬದಲಾಯಿಸಲಾಗಿದೆ.
ಸುಮಾರು 5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಬಿಪಿಎಲ್ ನಿಂದ ಕೈ ಬಿಡಲಾಗಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ಎರಡು ಮೂರು ತಿಂಗಳಿನಿಂದ ಅನರ್ಹರು ಪಡೆದುಕೊಂಡಿದ್ದ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಗಳನ್ನು ರದ್ದುಪಡಿಸುವ ಕಾರ್ಯಕ್ಕೆ ಆಹಾರ ಇಲಾಖೆ ಚಾಲನೆ ನೀಡಿದೆ. ಕಂದಾಯ ಇಲಾಖೆ, ತೆರಿಗೆ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ ದತ್ತಾಂಶ ಪಡೆದುಕೊಂಡು ಬಿಪಿಎಲ್ ಫಲಾನುಭವಿಗಳ ಆದಾಯ ಮೂಲ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ.
ಈ ದತ್ತಾಂಶದ ಮೂಲಕ ಮನೆಯಲ್ಲಿ ಯಾರಾದರೂ ತೆರಿಗೆ ಪಾವತಿದಾರರಿದ್ದರೆ ನೋಟಿಸ್ ನೀಡಿ, ಇಲ್ಲವೇ ನ್ಯಾಯಬೆಲೆ ಅಂಗಡಿಗಳಿಗೆ ಅಂಟಿಸಲಾಗಿರುವ ಪಟ್ಟಿಯಲ್ಲಿ ಹೆಸರು ಪ್ರಕಟಿಸಿ ಆಹಾರ ಇಲಾಖೆ ಎಚ್ಚರಿಕೆ ನೀಡಿತ್ತು. ಅಲ್ಲದೇ, ಅರ್ಹತೆ ಇಲ್ಲದಿದ್ದರೂ ಬಿಪಿಎಲ್ ಕಾರ್ಡ್ ಪಡೆದವರಿಗೆ ಕಾರ್ಡ್ ಮರಳಿಸಲು ಕಾಲಾವಕಾಶ ನೀಡಿದ್ದರೂ ಬಹುತೇಕರು ಬಿಪಿಎಲ್ ಕಾರ್ಡ್ ಗಳನ್ನು ಹಿಂತಿರುಗಿಸಿರಲಿಲ್ಲ. ಅಂತಹ ಲಕ್ಷಾಂತರ ಫಲಾನುಭವಿಗಳಿಗೆ ಪಡಿತರ ಹಂಚಿಕೆ ನಿಲ್ಲಿಸಲಾಗಿದೆ. 3.65 ಲಕ್ಷಕ್ಕೂ ಹೆಚ್ಚು ಕಾರ್ಡ್ ಗಳನ್ನು ಎಪಿಎಲ್ ಕಾರ್ಡ್ ಗಳಾಗಿ ಪರಿವರ್ತಿಸಲಾಗಿದೆ. ಕಳೆದ ಎರಡು ತಿಂಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕಾರ್ಡ್ ಗಳನ್ನು ಎಪಿಎಲ್ ಕಾರ್ಡ್ ಗಳಾಗಿ ಬದಲಾವಣೆ ಮಾಡಲಾಗಿದೆ.
ಇ- ಕೆವೈಸಿ ಮಾಡಿಸದ 6,16,196 ಕಾರ್ಡುಗಳಿವೆ. 1.20 ಲಕ್ಷ ರೂ ಗಿಂತ ಹೆಚ್ಚು ಆದಾಯ ಇರುವ 5,13,613 ಪಡಿತರ ಚೀಟಿಗಳಿವೆ. 57,864 ಅಂತರ ರಾಜ್ಯ ಪಡಿತರ ಚೀಟಿದಾರರು, 33,456 ಮಂದಿ 7.5 ಎಕರೆಗೂ ಅಧಿಕ ಭೂಮಿ ಹೊಂದಿದವರು. 19,893 ಕಾರ್ಡ್ ದಾರರು ಆರು ತಿಂಗಳಿನಿಂದ ರೇಷನ್ ಪಡೆಯದಿರುವವರು, 19,690 ಜನ ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವವರು, 2684 ಜನ 25 ಲಕ್ಷ ರೂ. ವಹಿವಾಟು ಮೀರಿದವರು, 1446 ಮೃತ ಸದಸ್ಯರು ಇರುವ ಕಾರ್ಡ್ ಗಳನ್ನು ಅನರ್ಹ ಪಡಿತರ ಚೀಟಿಗಳೆಂದು ಗುರುತಿಸಲಾಗಿದೆ.