ಬೆಂಗಳೂರು: ಪಡಿತರ ಚೀಟಿ ದತ್ತಾಂಶವನ್ನು ಜನನ ಮತ್ತು ಮರಣ ನೋಂದಣಿ ತಂತ್ರಾಂಶದೊಂದಿಗೆ ಸಂಯೋಜಿಸುವುದು ಸೇರಿದಂತೆ 189 ಹೊಸ ಶಿಫಾರಸುಗಳನ್ನು ಆಡಳಿತ ಸುಧಾರಣಾ ಆಯೋಗ ಸಲ್ಲಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 8ನೇ ಆಡಳಿತ ಸುಧಾರಣಾ ವರದಿಯನ್ನು ಆಯೋಗ -2ರ ಅಧ್ಯಕ್ಷ ಆರ್.ವಿ. ದೇಶಪಾಂಡೆ ಗುರುವಾರ ಸಲ್ಲಿಸಿದ್ದಾರೆ.
ಅನರ್ಹರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದನ್ನು ತಪ್ಪಿಸಲು ಪಹಣಿ, ವಾಹನ ನೋಂದಣಿ, ನೌಕರರ ವಿವರಗಳನ್ನು ಪಡಿತರ ಚೀಟಿ ದತ್ತಾಂಶಗಳೊಂದಿಗೆ ಜೋಡಿಸಬೇಕು ಎಂದು ಆಡಳಿತ ಸುಧಾರಣಾ ಆಯೋಗ-2 ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಮೂರು ಹೆಕ್ಟೇರ್ ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದ್ದರೆ ಬಿಪಿಎಲ್ ಪಡಿತರ ಕಾರ್ಡ್ ಪಡೆಯುವಂತಿಲ್ಲ. ಕೃಷಿ ಭೂಮಿಯ ದತ್ತಾಂಶಗಳನ್ನು ಪಡಿತರ ಚೀಟಿಗಳ ದತ್ತಾಂಶದೊಂದಿಗೆ ಸಮೀಕರಿಸಿದರೆ ಕೃಷಿ ಭೂಮಿ ಹೊಂದಿದವರ ಮಾಹಿತಿ ಪರಿಶೀಲಿಸಲು ಅನುಕೂಲವಾಗುತ್ತದೆ.
ಹೆಚ್.ಆರ್.ಎಂ.ಎಸ್. ತಂತ್ರಾಂಶದಿಂದ ಸರ್ಕಾರಿ ನೌಕರರ ಮಾಹಿತಿ, ವಾಹನ ನೋಂದಣಿ ದತ್ತಾಂಶ, ಆಸ್ತಿ ನೊಂದಣಿ ವಿವರಗಳನ್ನು ಆಹಾರ ಇಲಾಖೆಯ ಪಡಿತರ ವ್ಯವಸ್ಥೆಗೆ ಜೋಡಣೆ ಮಾಡಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳ ಗ್ರಾಮ ಸಭೆ ಅಥವಾ ವಾರ್ಡ್ ಸಭೆಗಳಲ್ಲಿ ಬಿಪಿಎಲ್ ಕುಟುಂಬಗಳನ್ನು ಗುರುತಿಸಿ ಅಂತಿಮ ಅನುಮೋದನೆ ಪಡೆದುಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಗ್ರಾಮ ಸಭೆ ಅಥವಾ ವಾರ್ಡ್ ಸಭೆಗಳಲ್ಲಿ ಬಿಪಿಎಲ್ ಕುಟುಂಬಗಳನ್ನು ಗುರುತಿಸಿ ಅಂತಿಮ ಅನುಮೋದನೆ ಪಡೆದುಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.