ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ನಮ್ಮ ರಾಜ್ಯ ಸರ್ಕಾರದ ವಿರೋಧವಿದೆ. ರಾಜ್ಯದಲ್ಲಿ ಅದನ್ನು ಅನುಷ್ಠಾನ ಮಾಡುವುದಿಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಭಾನುವಾರ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಜಮೀರ್ ಅಹ್ಮದ್ ಖಾನ್ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ನಮ್ಮ ಸರ್ಕಾರದ ವಿರುದ್ಧ ವಿರೋಧವಿದ್ದು, ರಾಜ್ಯದಲ್ಲಿ ಕಾನೂನು ಜಾರಿಗೆ ತರದಿರಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ವಕ್ಫ್ ಕಾಯ್ದೆಯನ್ನು ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಜಾರಿಗೊಳಿಸದಿರಲು ನಿರ್ಧರಿಸಿವೆ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಕ್ಫ್ ಕಾಯ್ದೆ ಕೇಂದ್ರದ ಕಾನೂನು. ಇದನ್ನು ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೆ ತರಲೇಬೇಕಿದೆ. ಕರ್ನಾಟಕದಲ್ಲಿಯೂ ಇದನ್ನು ಜಾರಿಗೆ ತರಬೇಕಿದೆ. ಇದಕ್ಕೆ ಬೇರೆ ಯಾವ ಆಯ್ಕೆಯೂ ಇಲ್ಲ ಎಂದು ತಿಳಿಸಿದ್ದಾರೆ.