ಬೆಂಗಳೂರು : ಏಪ್ರಿಲ್-ಮೇ ತಿಂಗಳಿನಲ್ಲಿ ಗ್ರಾಮ ಪಂಚಾಯತ್ ಮೂಲಕ ‘ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ’ ಆಯೋಜಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮ ಪಂಚಾಯತಿ ಅರಿವು ಕೇಂದ್ರದಲ್ಲಿ ಹಲವು ಮಕ್ಕಳ ಸ್ನೇಹಿ ಚಟುವಟಿಕೆಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ.
ಮುಂದುವರೆದ ಭಾಗವಾಗಿ ಗ್ರಾಮ ಪಂಚಾಯತಿ ನೇತೃತ್ವದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಅರಿವು ಕೇಂದ್ರಗಳ ಮೂಲಕ ಶಾಲೆಗಳ ಬೇಸಿಗೆ ರಜೆಯ ಸಮಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಶಿಬಿರದ ನಿರ್ವಹಣೆಯನ್ನು ಅರಿವು ಕೇಂದ್ರದ ಮೇಲ್ವಿಚಾರಕರು, ಗ್ರಾಮ ಪಂಚಾಯತಿ ಪುನರ್ವಸತಿ ಕಾರ್ಯಕರ್ತರು ಮತ್ತು ಗುರುತಿಸಿದ ಸ್ವಯಂ ಸೇವಕರೊಂದಿಗೆ (ಆಸಕ್ತ ಶಾಲಾ ಶಿಕ್ಷಕರು/ನಿವೃತ್ತ ಶಾಲಾ ಶಿಕ್ಷಕರು/ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು/ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು/ಸಂಘ ಸಂಸ್ಥೆಗಳು) ಪರಿಣಾಮಕಾರಿಯಾಗಿ ಆಯೋಜಿಸಲು ಕ್ರಮವಹಿಸುವುದು. ಆಡಳಿತಾತ್ಮಕ ಬೆಂಬಲವನ್ನು ನೀಡುವುದರ ಜೊತೆಗೆ ಶಿಬಿರದ ಪೂರ್ಣ ಮೇಲುಸ್ತುವಾರಿಯನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನಿರ್ವಹಿಸುವುದು.
ಹದಿನೈದು ದಿನಗಳ ಕಾಲ ಶಿಬಿರವನ್ನು ಆಯೋಜಿಸುವ ಮೂಲಕ ಓದುವ, ಬರೆಯುವ, ಕಲಾತ್ಮಕ ಚಟುವಟಿಕೆಗಳಿಗೆ ಮತ್ತು ಆಟಗಳಿಗೆ ಒತ್ತು ನೀಡುವುದು.
ಶಿಬಿರದ ಉದ್ದೇಶ
ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳು ತಮ್ಮ ಬೇಸಿಗೆ ರಜೆಯನ್ನು ಮನರಂಜನೀಯವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಓದುವ, ಬರೆಯುವ, ಅಂಕಿ ಸಂಖ್ಯೆ ವಿಜ್ಞಾನ ವಿಷಯಗಳು, ನಾಯಕತ್ವ ಮತ್ತು ಸಂವಹನ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ. ಪರಿಸರ ಕಾಳಜಿ, ಸಾಮಾಜಿಕ ಕಾಳಜಿ ಬೆಳೆಸುವುದು ಮತ್ತು ಸ್ಥಳೀಯ ಸಂಸ್ಕೃತಿ, ಜೀವನ ಶೈಲಿ, ಇತಿಹಾಸ ಅಂಶಗಳನ್ನು ತಿಳಿಯುವಂತೆ ಮಾಡುವುದು ಹಾಗೂ ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಬೇಸಿಗೆ ಶಿಬಿರದ ಆಶಯವಾಗಿರುತ್ತದೆ. ತನ್ಮೂಲಕ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಲು ಮಕ್ಕಳನ್ನು ಪ್ರೇರೇಪಿಸುವುದು.
ಶಿಬಿರದ ಚಟುವಟಿಕೆಗಳು
ಮಕ್ಕಳಲ್ಲಿ ಸೃಜನಾತ್ಮಕತೆಗೆ ಸಹಾಯಕವಾಗಿ ಮಕ್ಕಳ ಪುಸ್ತಕ, ದಿನಪತ್ರಿಕೆ, ನಿಯತಕಾಲಿಕೆಗಳನ್ನು ಓದುವುದು, ಚಿತ್ರ ಓದುವಿಕೆ (ಕಾರ್ಡ್) ಕಥೆ ಕಟ್ಟುವಿಕೆ, ಗಟ್ಟಿ ಓದು (Read Aloud), ಪತ್ರ ಬರೆಯುವುದು, ಕವನ ರಚಿಸುವುದು, ಚರ್ಚೆ ಮಾಡುವುದು, ಭಾಷಣ ಮಾಡುವುದು ಸೇರಿದಂತೆ ಬರೆಯುವ ಹಾಗೂ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚಿಸುವ ಸಂಬಂಧ ಶಿಬಿರದ ಅವಧಿಯಲ್ಲಿ ಆಯೋಜಿಸುವುದು.
ಶಿಬಿರದ ಚಟುವಟಿಕೆಗಳಿಗೆ ಅವಶ್ಯವಿರುವ ಸ್ಥಳಾವಕಾಶ, (ಒಳಾಂಗಣ ಮತ್ತು ಹೊರಾಂಗಣ) ಸಾಧನ ಸಲಕರಣೆಗಳು ಶಾಲೆಗಳಲ್ಲಿ ಲಭ್ಯವಿದ್ದಲ್ಲಿ ಮುಖ್ಯ ಶಿಕ್ಷಕರೊಂದಿಗೆ ಸಮನ್ವಯತೆಯಲ್ಲಿ ಬಳಸಿಕೊಳ್ಳುವುದು.
ಸಂಖ್ಯೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಕಾಮನಬಿಲ್ಲು ಮೂಡಿಸುವಿಕೆ, ವಿವಿಧ ಗಣಿತದ ಘನಾಕೃತಿಗಳ ಪರಿಚಯ, ಚಿನ್ನಿದಾಂಡು, ಗ್ರಾಮದಲ್ಲಿ ಬಳಸುವ ಅಳತೆ ಮತ್ತು ಮಾಪಕಗಳು, ಟ್ಯಾನ್ಗ್ರಾಮ್, ಪೇಪರ್ ಫ್ಯಾನ್, ಜೆಟ್ ಪ್ಲೇನ್, ಕಣ್ಣುಮಿಟುಕಿಸುವ ಗೊಂಬೆ, ಚದುರಂಗ, ಕೇರಂ, ಆಕಾಶ ವೀಕ್ಷಣೆ ಮತ್ತಿತರೆ ಚಟುವಟಿಕೆಗಳನ್ನು ಸ್ಥಳೀಯವಾಗಿ ಹಮ್ಮಿಕೊಳ್ಳುವುದು.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ನಾಯಕತ್ವ, ನೈತಿಕತೆ, ಸಹಾನುಭೂತಿ, ಜವಾಬ್ದಾರಿ ನಿರ್ವಹಣೆ, ತಂಡ ನಿರ್ವಹಣೆ, ಸಾಮಾಜಿಕ ಹೊಂದಾಣಿಕೆ ಮತ್ತು ನಾಗರಿಕ ಪುಜ್ಞೆ ವಿಷಯವಾಗಿ ವಿವಿಧ ಚಟುವಟಿಕೆಗಳನ್ನು ನಡೆಸುವುದು.
ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು, ದೈನಂದಿನ ಬದುಕಿನಲ್ಲಿ ಕಾಣುವ ಚಟುವಟಿಕೆಗಳನ್ನು ಅರಿಯಲು, ಶೋಧನಾ ಪ್ರವೃತ್ತಿ ಪ್ರೋತ್ಸಾಹಿಸಲು ಮತ್ತು ಕಲಿತದ್ದನ್ನು ವರದಿ ಮಾಡಲು ಯೋಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು. ಯೋಜನಾ ಚಟುವಟಿಕೆಗಳಲ್ಲಿ ಪ್ರಮುಖವಾಗಿ ನಮ್ಮೂರಿನ ಪಕ್ಷಿಗಳು, ನೀರಿನ ಪಯಣ, ನನ್ನ ಊರು, ನಮ್ಮೂರಿನ ಇತಿಹಾಸ, ನಮ್ಮೂರ ಜಾತ್ರೆ, ನಮ್ಮೂರ ಜನಪದ ಗೀತೆಗಳು/ಜನಪದ ಕಥೆ, ನಮ್ಮೂರ ಕ್ರೀಡೆಗಳು, ನಮ್ಮೂರ ಕಲೆಗಳು, ಸ್ಥಳೀಯ ಸಂಸ್ಥೆಗಳಿಗೆ(ಅಂಚೆ ಕಚೇರಿ, ಹಾಲು ಉತ್ಪಾದಕರ ಸಹಕಾರ ಸಂಘ, ಬ್ಯಾಂಕ್, ಪಶುವೈದ್ಯಕೀಯ ಆಸ್ಪತ್ರೆ, ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯತಿ, ಆಸ್ಪತ್ರೆ ಇತ್ಯಾದಿ) ಭೇಟಿ ಮಾಡಲು ಹಾಗೂ ಯೋಜನಾ ಕಾರ್ಯವನ್ನು ಕೈಗೊಳ್ಳಲು ಹತ್ತು ಮಕ್ಕಳ ತಂಡವನ್ನು ರಚಿಸಿಕೊಳ್ಳುವುದು ಹಾಗೂ ಭೇಟಿಗೆ ಅಗತ್ಯ ಕ್ರಮವಹಿಸುವುದು.
ಶಿಬಿರದ ಅವಧಿಯಲ್ಲಿ ಮಕ್ಕಳಲ್ಲಿ ಲವಲವಿಕೆ ಮೂಡಿಸುವ ವಿವಿಧ ಚಟುವಟಿಕೆಗಳನ್ನು (ಸಂದೇಶವುಳ್ಳ ಆಟಗಳನ್ನು ಏರ್ಪಡಿಸುವುದು.ಬೇಸಿಗೆ ಶಿಬಿರವನ್ನು ಆಯೋಜಿಸಲು, ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಮಾರ್ಗಸೂಚಿಯನ್ನು ಲಗತ್ತಿಸಿದೆ.
ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸಲು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ, ಮೈಸೂರು ವತಿಯಿಂದ ಸಿದ್ಧಪಡಿಸಲಾದ “ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಚಟುವಟಿಕೆಗಳ ಆಯೋಜನೆ ಕೈಪಿಡಿ”ಯನ್ನು ಈ ಕೆಳಕಂಡ ಲಿಂಕ್ ನಲ್ಲಿ ಪಡೆದುಕೊಳ್ಳುವುದು.



