ಬೆಂಗಳೂರು : ನಿವೃತ್ತಿ/ಸ್ವ-ಇಚ್ಚಾ ನಿವೃತ್ತಿ ಹೊಂದುವ ಸರ್ಕಾರಿ ನೌಕರರ ಪಿಂಚಣಿ ಅರ್ಜಿಗಳನ್ನು ಮಹಾಲೇಖಪಾಲರಿಗೆ ಖಜಾನೆ-2ರ ತಂತ್ರಾಂಶದ ಮುಖಾಂತರ ಸಲ್ಲಿಸುವ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಏನಿದೆ ಆದೇಶದಲ್ಲಿ..?
ಉಲ್ಲೇಖಿತ ಸರ್ಕಾರದ ಆದೇಶದಲ್ಲಿ, ಖಜಾನೆ-2ರ ತಂತ್ರಾಂಶದ ಮುಖಾಂತರ ಪ್ರಾಯೋಗಿಕವಾಗಿ, ಏಪ್ರಿಲ್ 2025 ರಿಂದ ಮೂರು ತಿಂಗಳ ಕಾಲ ರಾಜ್ಯದ ಎಲ್ಲಾ ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳು (ಡಿಡಿಓ) ವಯೋನಿವೃತ್ತಿ /ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿಗೆ ಸಂಬಂಧಿಸಿದ ಅರ್ಜಿಗಳನ್ನು ಆನ್ಲೈನ್ ನಲ್ಲಿ ದಾಖಲಿಸಿ ಮಂಜೂರು ಮಾಡುವುದು ಮತ್ತು ಭೌತಿಕವಾಗಿ ಸಿದ್ಧಪಡಿಸಿರುವ ಅರ್ಜಿ ಹಾಗೂ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮಹಾಲೇಖಪಾಲರಿಗೆ ನಿಯಮಾನುಸಾರ ಸಲ್ಲಿಸಲು ಆದೇಶಿಸಿದೆ.ಪ್ರಾಯೋಗಿಕ ಹಂತವು ಯಶಸ್ವಿಯಾದಲ್ಲಿ, ಖಜಾನೆ-2ರ ತಂತ್ರಾಂಶದ ಮುಖಾಂತರ ಪಿಂಚಣಿ ಅರ್ಜಿಗಳನ್ನು ಮಹಾಲೇಖಪಾಲರಿಗೆ ಸಲ್ಲಿಸಲು ಮುಂದುವರೆಸುವುದು ಎಂದು ಸಹ ಆದೇಶಿಸಿದೆ. ಈ ಕುರಿತು ವಿವಿಧ ಪಾತ್ರಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆದೇಶದ ಅನುಬಂಧದಲ್ಲಿ ವಿವರಿಸಿದ್ದು ಪ್ರಮುಖ ಅಂಶಗಳು ಕೆಳಕಂಡಂತಿವೆ.
a. ಡಿಡಿಓ ರವರು ತಮ್ಮ ಕಛೇರಿಯಲ್ಲಿ ನಿವೃತ್ತಿ /ಸ್ವ-ಇಚ್ಚಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಖಜಾನೆ-2 ರ ತಂತ್ರಾಂಶದ ಮುಖಾಂತರ ಮಂಜೂರು ಮಾಡುವುದು ಮತ್ತು ನಿಯಮಗಳ ಅನುಸಾರ ಭೌತಿಕ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮಹಾಲೇಖಪಾಲರಿಗೆ ಸಲ್ಲಿಸುವುದು. ಭೌತಿಕ ಅರ್ಜಿಗಳನ್ನು ಸಲ್ಲಿಸುವ ಮುಖ ಪುಟದಲ್ಲಿ ಖಜಾನೆ-2 ರಲ್ಲಿ ಸೃಜನೆಗೊಳ್ಳುವ Case Number ನಮೂದಿಸಿ ಹಾಗೂ Form-7 ಮತ್ತು Form 7A ಅನ್ನು ಕಡ್ಡಾಯವಾಗಿ ಲಗತ್ತಿಸಿ ಸಲ್ಲಿಸಬೇಕಾಗಿರುತ್ತದೆ. ಈ ಪ್ರಕ್ರಿಯೆಯು ನಿವೃತ್ತಿ /ಸ್ವ-ಇಚ್ಚಾ ನಿವೃತ್ತಿ ಹೊಂದುವ ನೌಕರರ ಪಿಂಚಣಿಗಳಿಗೆ ಮಾತ್ರ ಅನ್ವಯಿಸಲಿದ್ದು ಇತರೆ ಪಿಂಚಣಿಗಳ ಸಂಬಂಧ ಮುಂದಿನ ಆದೇಶದವರೆಗೆ ಈಗಿರುವ ವ್ಯವಸ್ಥೆಯೇ ಮುಂದುವರೆಯುತ್ತದೆ. ಖಜಾನೆ-2 ರ ತಂತ್ರಾಂಶದಲ್ಲಿ ಅರ್ಜಿಗಳನ್ನು ಸಿದ್ಧಪಡಿಸುವಾಗ HRMS ಅನುಕಲನದ ಮುಖಾಂತರ ಸ್ವೀಕೃತವಾಗುವ ದತ್ತಾಂಶದಲ್ಲಿ ಯಾವುದೇ ತಪ್ಪಿದ್ದಲ್ಲಿ, HRMS ನಲ್ಲಿ ಸರಿಪಡಿಸಿಕೊಂಡು ಸರಿಯಾದ ದತ್ತಾಂಶವನ್ನು ಸೆಳೆಯಬೇಕು.