ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಆಯೋಗದ ವರದಿ ಅನುಷ್ಠಾನ ಬಗ್ಗೆ ಆಗಸ್ಟ್ 16ರ ಶನಿವಾರ ಕರೆದಿದ್ದ ವಿಶೇಷ ಸಂಪುಟ ಸಭೆ ಮತ್ತೆ ಮುಂದೂಡಿಕೆಯಾಗಿದೆ.
ಆಗಸ್ಟ್ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಲು ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಮೂಲಕ ಪರಿಶಿಷ್ಟ ಜಾತಿಗೆ ಮೀಸಲಾದ ಶೇಕಡ 17ರಷ್ಟು ಮೀಸಲಾತಿಯನ್ನು ಪ್ರವರ್ಗವಾರು ವಿಂಗಡಿಸಿ ಒಳ ಮೀಸಲಾತಿ ಕಲ್ಪಿಸಲು ತಿಳಿಸಲಾಗಿದೆ.
ಈ ವರದಿ ಅನುಷ್ಠಾನಕ್ಕೆ ಆಗಸ್ಟ್ 8ರಂದು ನಡೆದ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಸಂಪುಟ ಸದಸ್ಯರಿಗೆ ವರದಿ ನೀಡಲಾಗಿತ್ತು. ಆಗಸ್ಟ್ 16ರಂದು ನಡೆಯುವ ಸಂಪುಟ ಸಭೆಗೆ ವರದಿಯ ಅಧ್ಯಯನ ನಡೆಸಿ ಬರುವಂತೆ ತಿಳಿಸಲಾಗಿತ್ತು. ಆದರೆ, ಆಗಸ್ಟ್ 16 ಸಭೆ ಮುಂದೂಡಿಕೆಯಾಗಿದ್ದು, ಆಗಸ್ಟ್ 19ರಂದು ನಡೆಯುವ ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.