ಬೆಂಗಳೂರು: ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್ ಅವರ ಪತ್ರಿಕೋದ್ಯಮದಲ್ಲಿನ ಸೇವೆ ಗುರುತಿಸಿ ರಾಜ್ಯ ಸರ್ಕಾರ 2025ನೇ ಸಾಲಿನ ದಿ. ದೇವರಾಜ ಅರಸು ಪ್ರಶಸ್ತಿ ಘೋಷಿಸಿದೆ.
ಸಾಮಾಜಿಕ ಪರಿವರ್ತನೆಯ ಹರಿಕಾರ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆಯಂದು(ಆ.20) ವಿಧಾನಸೌಧದ ಬ್ಯಾಕ್ವೇಟ್ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಶಾಕಿರಣವಾಗಿ, ಸಾಮಾನ್ಯ ನ್ಯಾಯದ ಪ್ರತಿಪಾದಕರಾಗಿ, ನೊಂದವರ ಬದುಕಿಗೆ ಹೊಸ ಚೇತನ ನೀಡಿ, ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು, ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿ ಗಾಗಿ ಶ್ರಮಿಸಿದ ಮಹಾನ್ ಚೇತನ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ಹೆಸರಿನಲ್ಲಿ ಕರ್ನಾಟಕ ಸರ್ಕಾರವು ಪ್ರತಿಷ್ಠಾಪಿಸಿರುವ ರಾಜ್ಯ ಮಟ್ಟದ ಪ್ರಶಸ್ತಿಗೆ ಕಲ್ಲೆ ಶಿವೋತ್ತಮರಾವ್ ಆಯ್ಕೆಯಾಗಿರುತ್ತಾರೆ.
ಕಲ್ಲೆ ಶಿವೋತ್ತಮರಾವ್ ಇವರು 1929ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜನಿಸಿದರು. ಇವರ ಮಾತೃ ಭಾಷೆ ತುಳು. ಇವರು ಚಿಕ್ಕವರಿದ್ದಾಗ ಆಟದಲ್ಲಿ ಅಂತಹ ಆಸಕ್ತಿ ಇರಲಿಲ್ಲ. ಆಟದ ಸಮಯದಲ್ಲಿ, ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿದ್ದ ಅಪ್ಪನ ಲೈಬ್ರರಿಯಲ್ಲಿದ್ದ ಪುಸ್ತಕಗಳನ್ನೆಲ್ಲ ಪಾಠದಂತೆ ಓದಿ, ಮಹಾಭಾರತ, ರಾಮಾಯಣ, ಭಗವದ್ಗೀತೆಗಳನ್ನು ಬಾಯಿಪಾಠ ಮಾಡಿದ್ದರು. ಆದಕಾರಣ 14ನೇ ವಯಸ್ಸಿಗೆ ಮಂಗಳೂರಿನ ಕುಡವರ ‘ನವಭಾರತ’ ಎಂಬ ದೈನಿಕಕ್ಕೆ ವರದಿಗಾರನಾಗಿ ಕೆಲಸಕ್ಕೆ ಸೇರಿದರು. ಆನಂತರ ಕಡಂಗೋಡ್ಲು ಶಂಕರಭಟ್ಟರ ‘ರಾಷ್ಟ್ರ ಬಂಧು’ ವಾರಪತ್ರಿಕೆಗೆ ಸೇರಿ, `ರಾಷ್ಟ್ರ ಮತ’ ದಲ್ಲಿ ಸ್ವಲ್ಪ ದಿನವಿದ್ದು, ಅಲ್ಲಿಂದ ನೇರವಾಗಿ ಬೆಂಗಳೂರಿನ ಬಿ.ಎನ್.ಗುಪ್ತರ ‘ಜನಪ್ರಗತಿ’ ಪತ್ರಿಕೆಗೆ ಬಂದರು. ಅಲ್ಲಿ 14 ವರ್ಷಗಳ ಕಾಲ, ಕಾರ್ಯನಿರ್ವಾಹಕ ಸಂಪಾದಕರಾಗಿ, ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಅದಾದ ಮೇಲೆ ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ತಲಾ ಮೂರು ವರ್ಷ ಸೇವೆ ಸಲ್ಲಿಸಿದರು. ಎನ್‌ಲೈಟ್’ ಎಂಬ ಇಂಗ್ಲಿಷ್ ವಾರಪತ್ರಿಕೆಗೂ ಬರೆದರು. ಇವರು ಜೆಪಿ, ಲೋಹಿಯಾರ ಸಮಾಜವಾದ; ಎಡಪಂಥೀಯ ವಿಚಾರಧಾರೆಯನ್ನು ಒಪ್ಪಿದವರು.
ಆಗಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ, ತಾಯಿನಾಡು, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ ದೈನಿಕಗಳು ಮತ್ತು ಜನಪ್ರಗತಿ, ಕಂಠೀರವ ಎಂಬ ವಾರಪತ್ರಿಕೆಗಳು, ಜನಪ್ರಗತಿ ವಾರಪತ್ರಿಕೆಯಲ್ಲಿ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸುವ, ಓದುಗರನ್ನು ಜಾಗೃತರನ್ನಾಗಿಸುವ ಅಗ್ರ ಲೇಖನಗಳು ಪ್ರಕಟವಾಗುತ್ತಿದ್ದ ಕಾರಣ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಪತ್ರಿಕೆಯ ಸಂಪಾದಕರಾಗಿದ್ದ ಕಲ್ಲೆ ಶಿವೋತ್ತಮ ರಾಯರು ಪ್ರಬುದ್ಧ, ಚಿಂತನಾರ್ಹ ರಾಜಕೀಯ ವಿಶ್ಲೇಷಣೆಗೆ ಹೆಸರಾಗಿದ್ದರು.
ಕಲ್ಲೆ ಶಿವೋತ್ತಮರಾವ್ ರವರು ಹಾವನೂರು ಆಯೋಗ ರಚನೆ ಪೂರ್ವದಲ್ಲಿಯೇ ಹಿಂದುಳಿದ ವರ್ಗಗಳ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದವರು, ಪೆರಿಯಾರ್ ಚಳುವಳಿಯ ಪ್ರತಿಪಾದಕರು, ಡಿ. ದೇವರಾಜ ಅರಸು ಅವರಿಗಿಂತ ಮೊದಲೇ ಹಿಂದುಳಿದ ವರ್ಗಗಳ ಸಮುದಾಯದ ಯುವಕರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಮೂಡಿಸಲು ಶ್ರಮಿಸಿದ್ದ ವ್ಯಕ್ತಿ. “ಜನಪ್ರಗತಿ” ಪತ್ರಿಕೆಯ ಸಂಪಾದಕರಾಗಿ ನೂರಾರು ಯುವಕರನ್ನು ಬರವಣಿಗೆ ಕ್ಷೇತ್ರಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಿಎಂ ಅಭಿನಂದನೆ:
ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ಪ್ರಶಸ್ತಿಗೆ ಪಾತ್ರರಾದ ಹಿರಿಯ ಪತ್ರಕರ್ತರು ಮತ್ತು ಪ್ರಗತಿಪರ ಚಿಂತಕರಾದ ಕಲ್ಲೆ ಶಿವೋತ್ತಮ ರಾವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸ್ ಅವರ ಚಿಂತಕರ ಚಾವಡಿಯಲ್ಲಿದ್ದ ಕಲ್ಲೆ ಅವರು ಅರಸು ಅವರ ಅನೇಕ ಕ್ರಾಂತಿಕಾರಿ ಕಾರ್ಯಕ್ರಮಗಳ ಹಿಂದಿನ ಪ್ರೇರಕಶಕ್ತಿಯಾಗಿದ್ದರು.
ಕಲ್ಲೆ ಅವರು ಸಂಪಾದಕರಾಗಿದ್ದ ಆಗಿನ ಜನಪ್ರಿಯ ವಾರಪತ್ರಿಕೆ ‘ಜನಪ್ರಗತಿ’ ನಾಡಿನ ರಾಜಕೀಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಮುಖವಾಣಿಯಾಗಿತ್ತು. ನಾಡಿನ ಅನೇಕ ಪ್ರಮುಖ ಸಾಹಿತಿಗಳ ಪ್ರಾರಂಭದ ದಿನಗಳ ಕತೆ-ಕವನ-ಲೇಖನಗಳು ಈ ಪತ್ರಿಕೆಯಲ್ಲಿಯೇ ಪ್ರಕಟವಾಗಿತ್ತಿತ್ತು. ಪ್ರಜಾವಾಣಿ ಪತ್ರಿಕೆಯಲ್ಲಿಯೂ ಕಲ್ಲೆ ಅವರು ಸ್ವಲ್ಪಕಾಲ ಕೆಲಸ ಮಾಡಿದ್ದರು.
ಹಿಂದುಳಿದ ಸಮುದಾಯಕ್ಕೆ ಸೇರಿರುವ ಕಲ್ಲೆ ಶಿವೋತ್ತಮ್ ರಾವ್ ಅವರು ನನ್ನ ರಾಜಕೀಯ ಜೀವನದ ಪ್ರಾರಂಭದ ದಿನಗಳಲ್ಲಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದರು.ಪ್ರಶಸ್ತಿ ಪುರಸ್ಕೃತರಾದ ಕಲ್ಲೆ ಅವರಿಗೆ ಆರೋಗ್ಯ ಮತ್ತು ಆಯುಷ್ಯ ಸದಾ ಒದಗಿ ಬರಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.
ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ಪ್ರಶಸ್ತಿಗೆ ಪಾತ್ರರಾದ
— Siddaramaiah (@siddaramaiah) August 18, 2025
ಹಿರಿಯ ಪತ್ರಕರ್ತರು ಮತ್ತು ಪ್ರಗತಿಪರ ಚಿಂತಕರಾದ ಕಲ್ಲೆ ಶಿವೋತ್ತಮ ರಾವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸ್ ಅವರ ಚಿಂತಕರ ಚಾವಡಿಯಲ್ಲಿದ್ದ ಕಲ್ಲೆ ಅವರು ಅರಸು ಅವರ ಅನೇಕ ಕ್ರಾಂತಿಕಾರಿ ಕಾರ್ಯಕ್ರಮಗಳ… pic.twitter.com/vY6AEGegj7