ಬೆಂಗಳೂರು: ಕಳೆದ 4 ವರ್ಷಗಳಿಂದ 7093 ಕೋಟಿ ರೂಪಾಯಿ ಬೆಗ್ಗರ್ಸ್ ಸೆಸ್ ಅನ್ನು ರಾಜ್ಯ ಸರ್ಕಾರ ಸಂಗ್ರಹಿಸಿದೆ. ಆದರೂ ಕೂಡ ರಸ್ತೆಗಳಲ್ಲಿ ಮಕ್ಕಳ ಭಿಕ್ಷಾಟನೆ ಮುಂದುವರೆದಿದೆ.
ಈ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಇದು ಏನೋ ಸರಿ ಇಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಹೈಕೋರ್ಟ್ ನಲ್ಲಿ ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲಾಗಿದೆ.
7093 ಕೋಟಿ ರೂಪಾಯಿ ಸೆಸ್ ನಲ್ಲಿ 3453 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳು 3639 ಕೋಟಿ ರೂಪಾಯಿ ವರ್ಗಾಯಿಸಬೇಕಿದೆ ಎಂದು ಪ್ರಮಾಣ ಪತ್ರ ಸಲ್ಲಿಸಲಾಗಿದೆ. ಸಾವಿರಾರು ಕೋಟಿ ರೂಪಾಯಿ ಹಣ ಖರ್ಚಾದರೂ ಮಕ್ಕಳ ಭಿಕ್ಷಾಟನೆ ನಿಂತಿಲ್ಲ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್ ವಾದ ಮಂಡಿಸಿದ್ದಾರೆ.
ಖರ್ಚಾದ ಹಣ ಮತ್ತು ಬಾಕಿ ಹಣದ ಲೆಕ್ಕ ನೀಡುವಂತೆ ಹೈಕೋರ್ಟ್ ಕೇಳಿದೆ. ಅಂಕಿ ಅಂಶ ಸಂಗ್ರಹಿಸಲು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಪ್ರಾಧಿಕಾರಕ್ಕೆ ಸಹಕರಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ 8 ವಾರಗಳಲ್ಲಿ ವರದಿ ಸಲ್ಲಿಸಲು ಸರ್ಕಾರ ಮತ್ತು ಕೆ.ಎಸ್.ಎಲ್.ಎಸ್.ಎ.ಗೆ ಸೂಚನೆ ನೀಡಲಾಗಿದೆ.
