ಚಿತ್ರದುರ್ಗ: ಬಸವ ಜಯಂತಿಯಂದು ಬೇರೆಯವರ ಜಯಂತಿ ಆಚರಣೆ ಮಾಡುವುದು ಬೇಡ ಎಂದು ಹೊಸದುರ್ಗ ತಾಲೂಕು ಸಾಣೆಹಳ್ಳಿಯ ಪಂಡಿತಾತಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಬಸವ ಜಯಂತಿ ಮತ್ತು ರೇಣುಕ ಜಯಂತಿಯನ್ನು ಒಂದೇ ದಿನ ಆಚರಿಸುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಸಂಸ್ಥೆಯ ರಾಜ್ಯಾಧ್ಯಕ್ಷ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಡಿತಾರಾಧ್ಯ ಶ್ರೀಗಳು, ಬಸವ ಜಯಂತಿಯಂದು ರೇಣುಕ ಜಯಂತಿ ಮಾಡುವ ಉದ್ದೇಶವೇನು? ಬಸವಣ್ಣ ಲಿಂಗಾಯಿತ ಧರ್ಮದ ಗುರು ಎಂದು ರೇಣುಕ ಪರಂಪರೆಯವರು ಒಪ್ಪುವರೇ? ಬಸವಣ್ಣ ಐತಿಹಾಸಿಕ ವ್ಯಕ್ತಿ. ರೇಣುಕರು? ಬಸವ ಜಯಂತಿಯಂದು ಬಸವಣ್ಣನವರ ವಿಚಾರಗಳು ಜನ ಮನಕ್ಕೆ ಮುಟ್ಟಬೇಕೆ ಹೊರತು ರೇಣುಕರು ಮತ್ತಿತರ ವಿಚಾರಗಳಲ್ಲ ಎಂದು ಹೇಳಿದ್ದಾರೆ.
ಬಸವಣ್ಣನವರ ತತ್ವ ಸಿದ್ಧಾಂತಗಳು ಸಮಾಜಮುಖಿ, ಜೀವ ಪರ. ಅಲ್ಲಿ ಸಮಾನತೆ ಇದೆ. ಸಕಲ ಜೀವಾತ್ಮರ ಒಳಿತಿದೆ. ಆತ್ಮ ಕಲ್ಯಾಣದ ಜೊತೆಗೆ ಲೋಕಕಲ್ಯಾಣವೂ ಇದೆ. ಇಂತಹ ಸಾಂಸ್ಕೃತಿಕ ನಾಯಕ ಲಿಂಗಾಯಿತ ಧರ್ಮದ ಸಂಸ್ಥಾಪಕ ಬಸವಣ್ಣನವರ ಆಶಯಗಳಿಗೆ ಮೆರಗು ಬರಬೇಕಾದಲ್ಲಿ ಬಸವ ಜಯಂತಿಯಂದು ಬಸವಣ್ಣನವರ ಭಾವಚಿತ್ರದ ಮೆರವಣಿಗೆ, ಅವರ ಸಂದೇಶಗಳ ಚಿಂತನ ಮಂಥನ ನಾಡಿನಲ್ಲಿ ಏಪ್ರಿಲ್ 30 ರಂದು ನಡೆಯುವುದು ಸ್ವಾಗತಾರ್ಹ ತಿಳಿಸಿದ್ದಾರೆ.
ಬಸವಣ್ಣನವರ ಜಯಂತಿಯಂದು ಬೇರೆ ಯಾರ ಜಯಂತಿಯ ಖಂಡಿತ ಬೇಡವೆಂದು ಶ್ರೀಗಳು ಹೇಳಿದ್ದಾರೆ.