BIG NEWS: 25 ಕೋಟಿ ರೂ. ಠೇವಣಿ ಇಟ್ಟು ಬಡಮಕ್ಕಳಿಗೆ ಐಎಎಸ್, ಐಪಿಎಸ್ ತರಬೇತಿ ಕೇಂದ್ರ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್: ಸಿಎಸ್ ಶಾಲಿನಿ ರಜನೀಶ್ ಚಾಲನೆ

ದಾವಣಗೆರೆ: ದಾವಣಗೆರೆಯ ಕಾಂಗ್ರೆಸ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಂಕಲ್ಪ ಹೆಸರಿನ ತರಬೇತಿ ಕೇಂದ್ರ ಆರಂಭಿಸಿದ್ದಾರೆ. 25 ಕೋಟಿ ರೂ. ಠೇವಣಿ ಇಟ್ಟು ಬಡ ಮಕ್ಕಳಿಗೆ ಐಎಎಸ್, ಐಪಿಎಸ್ ತರಬೇತಿ ಕೇಂದ್ರವನ್ನು ಆರಂಭಿಸಿದ್ದಾರೆ.

ಈ ತರಬೇತಿ ಕೇಂದ್ರಕ್ಕೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಚಾಲನೆ ನೀಡಿದ್ದಾರೆ.

ಎಸ್.ಎಸ್.ಕೇರ್ ಟ್ರಸ್ಟ್, ದಾವಣಗೆರೆ ವಿವಿ, ಐಎಎಸ್ ಬಾಬಾ ಅಕಾಡೆಮಿ ಸಹಯೋಗದಲ್ಲಿ ಬಿಐಇಟಿ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಂಕಲ್ಪ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಉದ್ಘಾಟಿಸಿದ ಶಾಲಿನಿ ರಜನೀಶ್ ಅವರು ಮಾತನಾಡಿ, ಜನರು ಹಲವು ತರಹದ ಸೇವೆ ಮಾಡುತ್ತಾರೆ. ದೇಶದ ಅಭಿವೃದ್ಧಿಯಲ್ಲಿ ಎಲ್ಲಾ ಕ್ಷೇತ್ರದ ಕೊಡುಗೆ ಬಹಳ ಮುಖ್ಯವಾಗುತ್ತದೆ. ರೈತ ಆಹಾರ ಉತ್ಪಾದನೆ ಮಾಡಲಿಲ್ಲ ಎಂದರೆ ಜನರ ಗತಿ ಏನಾಗುತ್ತದೆ. ಇದೇ ರೀತಿ ಪ್ರತಿಯೊಂದು ಕ್ಷೇತ್ರದಲ್ಲಿ ದುಡಿಯುತ್ತಿರುವವರ ಮಹತ್ವತೆ ಇರುತ್ತದೆ ಎಂದರು.

ಐಎಎಸ್ ಆಕಾಂಕ್ಷಿಗಳು ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯ, ಸಕರಾತ್ಮಕ ಚಿಂತನೆ ಹೊಂದಿರಬೇಕು. ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸತತ ಅಧ್ಯಯನ, ತಿಳಿದುಕೊಂಡಿರುವುದನ್ನು ಸಂಕ್ಷಿಪ್ತವಾಗಿ ಪ್ರಸ್ತುತ ಪಡಿಸುವುದು ಬಹಳ ಕೌಶಲ್ಯಯುತವಾದದು. ರಾಜ್ಯ, ರಾ‌ಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿನ ಪ್ರಚಲಿತ ವಿದ್ಯಮಾನ, ಸಾಮಾನ್ಯ ಜ್ಞಾನದ ಜೊತೆಗೆ ದೃಢ ಸಂಕಲ್ಪದೊಂದಿಗೆ ನಿರಂತರ, ಆಳವಾದ ಅಧ್ಯಯನ ರೂಢಿಸಿಕೊಂಡಾಗ ಮಾತ್ರ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು. ಕೇವಲ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸಿದರೆ ಸಾಲದು ಅದನ್ನು ಪ್ರತಿ ದಿನ ಮನನ ಮಾಡಿಕೊಳ್ಳುವ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅರಿತ ವಿಷಯವನ್ನು ವ್ಯಕ್ತಪಡಿಸುವ ಕೌಶಲ್ಯ, ಸಮಯ ಪ್ರಜ್ಞೆಯನ್ನು ಸಹ ರೂಢಿಸಿಕೊಳ್ಳಬೇಕು ಎಂದರು.

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಬಡವರ, ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿ ಎಂದು ಸಂಕಲ್ಪ ಉಚಿತ ತರಬೇತಿಯನ್ನು ಎಸ್.ಎಸ್.ಕೇರ್ ಟ್ರಸ್ಟ್, ದಾ.ವಿ.ವಿ ನಿಂದ ಆರಂಭಿಸಲಾಗಿದೆ. ಇದು ಪಕ್ಷಾತೀತವಾಗಿ ನಿರಂತರವಾಗಿ ನಡೆಯಬೇಕು ಎಂದರು.

ಬಡವರಿಗೆ ಆರೋಗ್ಯ ರಕ್ಷಣೆಗಾಗಿ ಆರಂಭವಾದ ಎಸ್.ಎಸ್.ಕೇರ್ ಟ್ರಸ್ಟ್ ಸೇವೆ ಸ್ಪರ್ಧಾತ್ಮಕ ಪರೀಕ್ಷಾ ಕ್ಷೇತ್ರಕ್ಕೂ ವಿಸ್ತರಿಸಲಾಗಿದೆ. ತರಬೇತಿಗೆ ಆಗಮಿಸುವ ದೂರದ ಅಭ್ಯರ್ಥಿಗಳಿಗೆ ಹಾಸ್ಟೆಲ್ ಗಾಗಿ ಕಟ್ಟಡ ಒದಗಿಸಲಾಗುತ್ತದೆ, ಡಿವೈಡಿಂಗ್ ಪಾವತಿ ವ್ಯವಸ್ಥೆಯಲ್ಲಿ ನಿರ್ವಹಣೆ ಮಾಡಲು ತಿಳಿಸಿದರು.

ಸಂಸದೆ ಡಾ: ಪ್ರಭಾ ಮಲ್ಲಿಕಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿ ‘ಮ್ಯಾಂಚೆಸ್ಟರ್’ ಎಂದೇ ಪ್ರಸಿದ್ಧಿಯಾಗಿದ್ದ ದಾವಣಗೆರೆಯನ್ನು “ಶಿಕ್ಷಣ ಕಾಶಿ”ಯಾಗಿ ರೂಪಿಸಿ, ಪ್ರಗತಿಯ ದಾರಿ ತೋರಿದವರು ಹಿರಿಯ ನಾಯಕ ಡಾ. ಶಾಮನೂರು ಶಿವಶಂಕರಪ್ಪಾಜಿಯವರಿಗೆ ಸಲ್ಲಬೇಕು. ಅವರ ದೂರದೃಷ್ಟಿ ಮತ್ತು ಸಮಾಜಪರ ಸೇವೆಯೇ ದಾವಣಗೆರೆಯನ್ನು ಇಂದು ರಾಜ್ಯ, ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಗುರುತಿಸಲು ಕಾರಣವಾಗಿದೆ ಎಂದರು.

ಸಂಕಲ್ಪ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ ಆಯ್ಕೆ ಮಾಡಲು ಜುಲೈ 27 ರಂದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಹರಿಹರ, ಜಗಳೂರು, ಚನ್ನಗಿರಿ, ಹೊನ್ನಾಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಾಗೂ ಹರಪನಹಳ್ಳಿಯ ಟಿ.ಎಂ.ಎ.ಇ. ಶಿಕ್ಷಣ ಮಹಾವಿದ್ಯಾಲಯದ(ತೆಗ್ಗಿನಮಠ) ಕಾಲೇಜುಗಳಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗೆ 1800 ಆಕಾಂಕ್ಷಿಗಳು ಹೆಸರು ನೋಂದಾಯಿಸಿದ್ದರು. ಇದರಲ್ಲಿ 850 ಮಂದಿ ಪ್ರವೇಶ ಪರೀಕ್ಷೆ ಬರೆದಿದ್ದು 300 ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದವರಿಗೆ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ಉಚಿತ ತರಬೇತಿ ನೀಡಲಾಗುವುದು. ಇದು ನಿಮ್ಮೆಲ್ಲರ ಶ್ರದ್ಧೆಗೆ ನಮ್ಮ ಸಂಕಲ್ಪವಾಗಿದೆ ಎಂದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸ್ವಾಗತಿಸಿದರು. ಜಿ.ಪಂ. ಸಿಇಓ ಗಿತ್ತೆ ಮಾಧವ ವಿಠ್ಠಲ ರಾವ್ ವಂದಿಸಿದರು. ಈ ವೇಳೆ ಎಸ್ಪಿ ಉಮಾ ಪ್ರಶಾಂತ್, ಐಎಎಸ್ ಬಾಬಾ ಸಂಸ್ಥಾಪಕ ಮೋಹನ್ ಕುಮಾರ್, ದಾವಣಗೆರೆ ವಿವಿಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read