ಬೆಂಗಳೂರು : ವಿಧಾನ ಸೌಧದ ಮುಂಭಾಗದಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ರಾಜ್ಯ ಮಟ್ಟದ ಜನತಾ ದರ್ಶನದ 2ನೇ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿದ್ದರು. ಸಾರ್ವಜನಿಕರಿಂದ ಬರುವ ಅಹವಾಲುಗಳು, ದೂರುಗಳು ಮತ್ತು ಮನವಿ ಅರ್ಜಿಗಳನ್ನು ಸ್ಥಳದಲ್ಲೇ ಪರಿಹರಿಸುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆನ್ ಲೈನ್ ವಿಡಿಯೋ ಸಂವಾದದ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಸಾಥ್ ನೀಡಿ ಜನರ ಅಹವಾಲು ವಿಲೇವಾರಿ ಪ್ರಕ್ರಿಯೆ ಕೆಲಸವನ್ನು ಮಾಡಿದರು.
ಇದೆ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಜನತಾ ದರ್ಶನದಲ್ಲಿ ಸುಮಾರು 20 ಸಾವಿರ ಜನರು ಭಾಗವಹಿಸಿದ್ದು, ತಮ್ಮ ಅಹವಾಲುಗಳನ್ನು ನೀಡಿದ್ದಾರೆ. ಸುಮಾರು 11 ಸಾವಿರ ಅರ್ಜಿಗಳು ಸ್ವೀಕೃತವಾಗಿವೆ. ಇದರಲ್ಲಿ ಹೆಚ್ಚಾಗಿ ಕಂದಾಯ ಇಲಾಖೆಗೆ ಸೇರಿದ ಅರ್ಜಿಗಳಾಗಿವೆ. ಕೆಲವು ಅರ್ಜಿಗಳಿಗೆ ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿ, ಆದೇಶಗಳನ್ನು ನೀಡಿದ್ದೇವೆ. ಜಿಲ್ಲೆಗಳಿಗೆ ಸಂಬಂಧಪಟ್ಟ ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳಿಗೆ, ಕಾರ್ಯದರ್ಶಿಗಳಿಗೆ ಕಳುಹಿಸಿಕೊಡಲಾಗಿದೆ. ಕೂಡಲೇ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು. ತ್ವರಿತವಾಗಿ ಇತ್ಯರ್ಥ ಪಡಿಸಬಹುದಾದ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಪಡಿಸಬೇಕು ಹಾಗೂ ಕಾನೂನಿಗೆ ವಿರುದ್ಧವಾದ ಅರ್ಜಿಗಳಿಗೆ ಸೂಕ್ತ ಹಿಂಬರಹ ನೀಡಬೇಕು ಎಂದು ಸೂಚನೆ ನೀಡಿದರು.
ಕಂದಾಯ, ಪೊಲೀಸ್ ಹಾಗೂ ಇತರೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೆಳ ಹಂತದಲ್ಲಿಯೇ ಬಗೆಹರಿಸಿದರೆ, ಜನರು ಬೆಂಗಳೂರಿಗೆ ಬಂದು ಇಷ್ಟೊಂದು ಅರ್ಜಿಗಳನ್ನು ನೀಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು. ವಿಶೇಷವಾಗಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಸಿಇಓ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಅಂದಾಗ ಮಾತ್ರ ಅರ್ಜಿಗಳ ಸಂಖ್ಯೆ ಕಡಿಮೆ ಆಗಲು ಸಾಧ್ಯವಾಗುತ್ತದೆ ಎಂದರು.
ಆಡಳಿತ ಎಂದು ಕೂಡ ಜಡತ್ವದಿಂದ ಕೂಡಿರಬಾರದು. ಇದರಿಂದ ಸಮಸ್ಯೆಗಳು ಹೆಚ್ಚು ಉದ್ಬವವಾಗುತ್ತವೆ. ಜನರು ಸಮಸ್ಯೆಗಳನ್ನು ಹೊತ್ತು ಬಂದಾಗ ಅಧಿಕಾರಿಗಳು ಸಾವಧಾನದಿಂದ ಆಲಿಸಬೇಕು.
ತಮ್ಮ ತಮ್ಮ ಹಂತದಲ್ಲಿಯೇ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳು ಕಾಳಜಿ ವಹಿಸಬೇಕು. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ, ಜನರಿಗೆ ಅಗೌರ ತೋರಿಸಿದರೆ ಅಂತಹ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.
ಒಂದು ತಿಂಗಳೊಳಗಾಗಿ ಅರ್ಜಿಗಳ ವಿಲೇವಾರಿ ಮಾಡುವಂತಹ ಕೆಲಸ ಆಗಬೇಕು. ಈ ಹಿನ್ನೆಲೆಯಲ್ಲಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅರ್ಜಿದಾರರು ಯಾವುದೇ ಚಿಂತೆ, ಸಂಶಯ ಪಡೆಯುವ ಅಗತ್ಯವಿಲ್ಲ. ಎಲ್ಲಾ ಅರ್ಜಿಗಳಿಗೂ ಸರ್ಕಾರದಿಂದ ಪರಿಹಾರ ಸಿಗಲಿದೆ ಎಂದು ಅವರು ಹೇಳಿದರು.