ಬೀದರ್ : ಏ.16 ರಂದು ಬೀದರ್ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 16ರಂದು ಬೀದರ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ 2025ನೇ ಇಸವಿಯಲ್ಲಿ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಸುಮಾರು 2025 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಸಿದ್ದರಾಮಯ್ಯ ಅವರ ಅಮೃತ ಹಸ್ತದಿಂದ ಶಿಲಾನ್ಯಾಸ ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಮಾಡಲಾಗುವುದು.
ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಸೇವೆಯನ್ನು ಇದೇ ಏಪ್ರಿಲ್ 15ರಿಂದ ಪುನಾರಂಭಗೊಳಿಸಲಾಗಿದ್ದು, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಏ.16 ರಂದು ಬೀದರ್ ನಗರಕ್ಕೆ ಆಗಮಿಸಿ, ವಿಮಾನಯಾನ ಸೇವೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.
ಮುಖ್ಯಮಂತ್ರಿಗಳಿಂದ ಶಿಲಾನ್ಯಾಸಗೊಳ್ಳಲಿರುವ ಪ್ರಮುಖ ಕಾಮಗಾರಿಗಳು
•ಪ್ರಜಾಸೌಧ (ಜಿಲ್ಲಾಡಳಿತ ಭವನ)
•ಭಾಲ್ಕಿ ಕ್ರೀಡಾಂಗಣ
•ಭಾಲ್ಕಿ ಹೊಸ ಆಸ್ಪತ್ರೆ
•ಹೊನ್ನಿಕೇರಿ ಪರಿಸರ ಪ್ರವಾಸೋದ್ಯಮ ಯೋಜನೆ
•ನೀರಾವರಿ ಯೋಜನೆಗಳು
ಬಸವಕಲ್ಯಾಣದ ಆಧುನಿಕ ಅನುಭವ ಮಂಟಪದ ಕಾಮಗಾರಿ ಮುಂದುವರೆದಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ. ಬೀದರ್ ಜಿಲ್ಲೆಯನ್ನು ಧಾರ್ಮಿಕ, ಐತಿಹಾಸಿಕ ಹಾಗೂ ಆಧ್ಯಾತ್ಮಿಕ ತಾಣವಾಗಿ ರೂಪಿಸುವಲ್ಲಿ ಈ ಯೋಜನೆಗಳು ಮಹತ್ವಪೂರ್ಣ ಪಾತ್ರ ವಹಿಸಲಿವೆ.
ಏ.16ರಂದು ನಡೆಯುವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಗಣ್ಯರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.