ಬೆಂಗಳೂರು: ರಾಜ್ಯದ ಎಲ್ಲಾ 215 ಕೈಗಾರಿಕಾ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಂದ ಆಗಬಹುದಾದ ಮಾಲಿನ್ಯ ತಗ್ಗಿಸುವ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ(IISC), IIT ರೀತಿಯ ಉನ್ನತ ಮಟ್ಟದ ಸಂಸ್ಥೆಗಳಿಂದ ವಿಸ್ತೃತ ಅಧ್ಯಯನ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಸೂಚಿಸಿದ್ದಾರೆ.
ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ ಅವರು, ಉದ್ಯಮಗಳನ್ನು ಬೆಳೆಸುವ ಜೊತೆಯಲ್ಲೇ ಪರಿಸರ ರಕ್ಷಣೆಯ ಅಗತ್ಯವಿದೆ ಎಂಬ ನೆಲ, ಜಲ, ವಾಯು, ಕೃಷಿ ಹಾಗೂ ಮಾನವ ಆರೋಗ್ಯದ ಮೇಲೆ ಕೈಗಾರಿಕೆಗಳಿಂದ ಉಂಟಾಗುವ ಪರಿಣಾಮಗಳನ್ನು ವಿಶ್ಲೇಷಿಸಲು ಅಧ್ಯಯನ ತಂಡಗಳನ್ನು ರಚಿಸಲಾಗುವುದು. ಈ ತಂಡಗಳು ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ಭೇಟಿನೀಡಿ, ಮಾಲಿನ್ಯದ ತೀವ್ರತೆಯನ್ನು ಗುರುತಿಸಿ, ಸೂಕ್ತ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲಿವೆ. ಈ ಉದ್ದೇಶಕ್ಕಾಗಿ ತಜ್ಞ ಸಂಸ್ಥೆಗಳನ್ನು ಗುರುತಿಸಿ, ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, KIADB CEO ಡಾ. ಮಹೇಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಕೈಗೊಂಡಿರುವ ವಿವಿಧ ಯೋಜನೆಗಳು, ಅನುಷ್ಠಾನಗೊಳಿಸಬೇಕಿರುವ ಕಾರ್ಯಕ್ರಮಗಳ ಕುರಿತಂತೆ ಸಚಿವರು ಚರ್ಚಿಸಿದ್ದಾರೆ.