ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾತಿ ಗಣತಿ ಮುಂದೂಡುವಂತೆ ಒತ್ತಡ ಹೆಚ್ಚಿದ್ದು, ಹೊಸದಾಗಿ 331 ಜಾತಿಗಳ ಸೇರ್ಪಡೆಗೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಾಗಿ ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಲಾದ ಜಾತಿ ಪಟ್ಟಿಯಲ್ಲಿ ಹಿಂದೂ ಜಾತಿಗಳ ಹೆಸರಿನ ಮುಂದೆ ಕ್ರಿಶ್ಚಿಯನ್ ಪದ ಸೇರ್ಪಡೆ, 331 ಹೊಸ ಜಾತಿಗಳನ್ನು ಉಲ್ಲೇಖಿಸಿರುವ ಬಗ್ಗೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾತಿ ಪಟ್ಟಿಯ ಕುರಿತಾಗಿ ಗೊಂದಲ ಬಗೆಹರಿಯುವವರೆಗೆ ಸಮೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಹಿರಿಯ ಸಚಿವರು ಜಾತಿ ಪಟ್ಟಿಯಲ್ಲಿ 331 ಹೊಸ ಜಾತಿಗಳ ಸೇರ್ಪಡೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಎಸ್.ಟಿ. ಪಟ್ಟಿಗೆ ಕುರುಬ ಸಮುದಾಯದ ಸೇರ್ಪಡೆ ಬಗ್ಗೆಯೂ ಭಾರೀ ಚರ್ಚೆ ನಡೆದಿದೆ. ಜಾತಿ ಗಣತಿ ಹೆಸರಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ನಡೆಸಲಾಗುತ್ತದೆ ಎಂದು ಬಿಜೆಪಿ, ಜೆಡಿಎಸ್ ಅಪಪ್ರಚಾರ ಮಾಡುತ್ತಿವೆ. ಈ ಅಪಪ್ರಚಾರ ಪಕ್ಷ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರಲಿದ್ದು, ಗೊಂದಲ ಬಗೆಹರಿಯುವವರೆಗೆ ಸಮೀಕ್ಷೆ ಮುಂದೂಡಬೇಕೆಂದು ಕೆಲವು ಸಚಿವರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ.