ಬೆಂಗಳೂರು: ಮುಸ್ಲಿಂ ಮಹಿಳೆಯರಿಗೆ ಆಸ್ತಿಯಲ್ಲಿ ಪುರುಷರಷ್ಟು ಸಮಾನ ಹಕ್ಕು ಇಲ್ಲದ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವಂತೆ ಹೈಕೋರ್ಟ್ ಸಲಹೆ ನೀಡಿದೆ.
ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಕುರಿತು ಅಭಿಪ್ರಾಯಪಟ್ಟಿದೆ. ಡಾ.ಬಿ.ಆರ್. ಅಂಬೇಡ್ಕರ್ ಕೂಡ ಏಕರೂಪ ನಾಗರಿಕ ಸಂಹಿತೆ ಪರವಾಗಿದ್ದರು ಎಂದು ಹೇಳಲಾಗಿದ್ದು, ಇದಕ್ಕಾಗಿ ಸಾಂವಿಧಾನಿಕ ಸಭೆಯ ಚರ್ಚೆಯನ್ನು ಹೈಕೋರ್ಟ್ ಉಲ್ಲೇಖಿಸಿದೆ.
ಸಂವಿಧಾನದ ಆರ್ಟಿಕಲ್ 44 ರಲ್ಲಿ ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾಪವಿದೆ. ಇದನ್ನು ಜಾರಿಗೆ ತಂದರೆ ಮುಸ್ಲಿಂ ಮಹಿಳೆಯರಿಗೂ ಸಮಾನ ನ್ಯಾಯ ಸಿಗಲಿದೆ. ಆಸ್ತಿ ಹಕ್ಕಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಈಗ ಸಮಾನ ಅಧಿಕಾರವಿಲ್ಲ. ಹಿಂದೂ ಮಹಿಳೆಯರಿಗೆ ಪುರುಷರಷ್ಟೇ ಸಮಾನವಾದ ಅಧಿಕಾರವಿದೆ. ಆದರೆ, ಮಹಮ್ಮದೀಯ ಕಾನೂನಿನಲ್ಲಿ ಸರಿ ಸಮಾನವಾದ ಪಾಲು ನೀಡಿಲ್ಲ. ದೇಶದ ಎಲ್ಲಾ ಹೆಣ್ಣು ಮಕ್ಕಳು ಸಮಾನರು. ಧರ್ಮದ ಕಾರಣದಿಂದ ಮಹಿಳೆಯರ ಹಕ್ಕಿನಲ್ಲಿ ತಾರತಮ್ಯ ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ.