ನವದೆಹಲಿ: ಮನಃಶಾಸ್ತ್ರ ಮತ್ತು ಆರೋಗ್ಯ ಸಂಬಂಧಿತ ಕೋರ್ಸ್ ಗಳನ್ನು ಇನ್ನು ಮುಂದೆ ದೂರ ಶಿಕ್ಷಣ ಅಥವಾ ಆನ್ಲೈನ್ ವಿಧಾನದ ಮೂಲಕ ಕಲಿಸುವುದನ್ನು ಸ್ಥಗಿತಗೊಳಿಸಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಆದೇಶ ಹೊರಡಿಸಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಅಂಡ್ ಹೆಲ್ತ್ ಕೇರ್ ಪ್ರೊಫೆಷನ್ಸ್ ಕಾಯ್ದೆ 2021ರ ಅನುಸಾರ ಆರೋಗ್ಯ ಸಂಬಂಧಿತ ಕೋರ್ಸ್ ಗಳನ್ನು ಆನ್ಲೈನ್ ಅಥವಾ ದೂರ ಶಿಕ್ಷಣದ ಮೂಲಕ ಕಲಿಸುವಂತಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳು ಈ ಕೋರ್ಸ್ ಗಳ ಕಲಿಕೆಗೆ ಪ್ರವೇಶ ನೀಡಿದ್ದರೆ ಅದನ್ನು ಹಿಂಪಡೆಯಲಾಗುವುದು ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ತಿಳಿಸಿದ್ದಾರೆ.
ವೃತ್ತಿಪರ ಮತ್ತು ಅಭ್ಯಾಸ ಆಧಾರಿತ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಮನೋವಿಜ್ಞಾನ, ಸೂಕ್ಷ್ಮ ಜೀವ ವಿಜ್ಞಾನ, ಜೈವಿಕ ತಂತ್ರಜ್ಞಾನ, ಕ್ಲಿನಿಕಲ್ ಪೌಷ್ಟಿಕಾಂಶ, ಆಹಾರ ಪದ್ಧತಿ ಮತ್ತು ಆಹಾರ ವಿಜ್ಞಾನ ಕಾರ್ಯಕ್ರಮಗಳು ಈ ನಿಷೇಧದ ಅಡಿಯಲ್ಲಿ ಬರುತ್ತವೆ ಎಂದು ತಿಳಿಸಿದ್ದಾರೆ.