ಕೊಪ್ಪಳ: ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕುಕನೂರು, ಯಲಬುರ್ಗಾ ತಾಲೂಕಿನ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳಲ್ಲಿ ಅನರ್ಹ ಅನುಭವಿಗಳಿಗೂ ಯೋಜನೆಯ ಲಾಭ ಹೋಗುತ್ತಿದೆ. ಇದನ್ನು ತನಿಖೆ ನಡೆಸಿ ಕಡಿವಾಣ ಹಾಕುವ ಮೂಲಕ ಜುಲೈನಿಂದ ಲಾಭ ಸಿಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಒಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಷಕ್ಕೆ ಗ್ಯಾರಂಟಿ ಯೋಜನೆಗಳಲ್ಲಿ ಅಂದಾಜು 250 ಕೋಟಿ ರೂಪಾಯಿ ನೀಡುತ್ತಿದ್ದು, ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿದೆ. ಆದರೆ, ಅರ್ಹರಲ್ಲದವರು ಸಹ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಿದ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಮನೆ ಬಾಡಿಗೆ ನೀಡಿದ್ದರೂ ಸಹ ಅವರಿಗೆ ಉಚಿತ ಗೃಹ ಜ್ಯೋತಿ ಯೋಜನೆ ದೊರೆಯುತ್ತಿದೆ. ಗೃಹಲಕ್ಷ್ಮಿಯಲ್ಲಿ ತೆರಿಗೆ, ಜಿಎಸ್‌ಟಿ ಪಾವತಿಸುವ ಕುಟುಂಬ ಸದಸ್ಯರಿಗೆ ಹಣ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಯಲಬುರ್ಗಾ ಕ್ಷೇತ್ರದಲ್ಲಿ ಪಡಿತರ ಚೀಟಿಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಕುರಿತಂತೆ ರಾಜ್ಯಾದ್ಯಂತ ತನಿಖೆ ಮಾಡಿಸಿ ಜುಲೈನಿಂದ ಅನರ್ಹರಿಗೆ ಯೋಜನೆಯ ಲಾಭ ಸಿಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.