ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಚಿನ್ನದ ನಿಕ್ಷೇಪ ಲಭ್ಯವಾಗಬಹುದು ಎನ್ನುವ ಸುಳಿವು ದೊರೆತಿದೆ.
ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳ ತಂಡ ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಖನಿಜ ನಿಕ್ಷೇಪಗಳ ಲಭ್ಯತೆ ಕುರಿತು ನಡೆಸಿದ ಪ್ರಾಥಮಿಕ ಹಂತದ ಸರ್ವೆಯಲ್ಲಿ ಹನೂರು ತಾಲೂಕಿನ ಅನೇಕ ಗ್ರಾಮಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ.
ಅಜ್ಜೀಪುರ, ಕೌದಳ್ಳಿ, ಅಲತ್ತೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಚಿನ್ನ ಸಹಿತ ಹಲವು ಉಪಯುಕ್ತ ಖನಿಜಗಳು ಲಭ್ಯವಾಗುವ ಸಾಧ್ಯತೆ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಆರು ತಿಂಗಳು ಸಂಶೋಧನೆ ನಡೆಯಲಿದ್ದು, ಚಿನ್ನದ ಲಭ್ಯತೆ ಬಗ್ಗೆ ಖಚಿತವಾದಲ್ಲಿ ಮಾತ್ರ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
