ಬೆಂಗಳೂರು: ಇತ್ತೀಚೆಗೆ ಸರ್ಕಾರಕ್ಕೆ ಶರಣಾಗಿದ್ದ ನಕ್ಸಲ್ ಮುಖಂಡರ ವಿರುದ್ಧ ದಾಖಲಾಗಿದ್ದ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯಿದೆ(ಯುಎಪಿಎ) ಪ್ರಕರಣಗಳಲ್ಲಿ ಅವರನ್ನು ಖುಲಾಸೆ ಮಾಡಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ನಕ್ಸಲ್ ನಾಯಕರಾದ ಮುಂಡಗಾರು ಲತಾ, ಕೋಟೆಗೊಂಡ ರವೀಂದ್ರ, ವನಜಾಕ್ಷಿ ಮತ್ತು ಸಾವಿತ್ರಿ ಅವರ ವಿರುದ್ಧ ದಾಖಲಾಗಿದ್ದ ಯುಎಪಿಎ ಪ್ರಕರಣಗಳಲ್ಲಿ ಅವರನ್ನು ಖುಲಾಸೆ ಮಾಡಲಾಗಿದೆ.
2009 ರಲ್ಲಿ ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಕ್ಕಡಿಬೈಲು ಬಸ್ ನಿಲ್ದಾಣ ಅಂಗಡಿ ಗೋಡೆಯ ಮೇಲೆ ಮುಂಡಗಾರು ಲತಾ, ರವೀಂದ್ರ, ಸಾವಿತ್ರಿ ಅವರು ಕರ ಪತ್ರ ಅಂಟಿಸಿ ಸರ್ಕಾರ ವಿರೋಧಿ ಘೋಷಣೆ ಕೂಗಿದ್ದರು ಎಂದು ಯುಎಪಿಎ ಪ್ರಕರಣ ದಾಖಲಾಗಿತ್ತು.
2015ರಲ್ಲಿ ಶೃಂಗೇರಿ ತಾಲೂಕಿನ ನೆಮ್ಮಾರಿನಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಗಂಗಾಧರ ಶೆಟ್ಟಿ ಅವರ ಬೈಕ್ ಅನ್ನು ಸುಟ್ಟು ಮಾವೋವಾದಿ ಪರ ಘೋಷಣೆ ಕೂಗಿದ ಆರೋಪದ ಮೇಲೆ ಮುಂಡಗಾರು ಲತಾ, ರವೀಂದ್ರ, ವನಜಾಕ್ಷಿ ವಿರುದ್ಧ ಕೇಸು ದಾಖಲಾಗಿತ್ತು.
2018ರಲ್ಲಿ ಥನಿಕೋಡು ಅರಣ್ಯ ಚೆಕ್ ಪೋಸ್ಟ್ ನಲ್ಲಿ ಸ್ಪೋಟಕ ಎಸೆದು ನಷ್ಟ ಮಾಡಿದ್ದ ಬಗ್ಗೆ ಮುಂಡಗಾರು ಲತಾ ಮತ್ತು ಇತರರ ವಿರುದ್ಧ ಯುಎಪಿಎ ಪ್ರಕರಣ ದಾಖಲಾಗಿತ್ತು.
ಬೆಂಗಳೂರಿನ ಯುಎಪಿಎ ಪ್ರಕರಣ ವಿಶೇಷ ಕೋರ್ಟ್ ನಲ್ಲಿ ಪ್ರಕರಣಗಳ ವಿಚಾರಣೆ ನಡೆಸಿದ್ದು, ಈ ಪ್ರಕರಣಗಳಲ್ಲಿ ನಾಲ್ವರು ಕೃತ್ಯ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಲ್ಲಿ ತನಿಖಾಧಿಕಾರಿಗಳು ವಿಫಲರಾಗಿದ್ದು, ಇವರ ವಿರುದ್ಧ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ ಗಳ ಅಡಿಯಲ್ಲಿ ದಾಖಲಿಸಿದ ಪ್ರಕರಣಗಳನ್ನು ವಜಾ ಮಾಡಬಹುದಾಗಿದೆ ಎಂದು ನ್ಯಾಯಾಧೀಶರಾದ ಸಿ.ಎಂ. ಗಂಗಾಧರ್ ತೀರ್ಪು ನೀಡಿದ್ದಾರೆ.