ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಅಡಿ ನೂತನವಾಗಿ ರಚಿಸಿರುವ 5 ಪಾಲಿಕೆಗಳ ವಾರ್ಡ್ ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಗೆ ಹೊಸ ವಾರ್ಡ್ ಒಂದನ್ನು ಸೇರ್ಪಡೆ ಮಾಡುವ ಮೂಲಕ 5 ನಗರ ಪಾಲಿಕೆಯ ವಾರ್ಡ್ ಸಂಖ್ಯೆಯನ್ನು 368 ರಿಂದ 300 69ಕ್ಕೆ ಹೆಚ್ಚಳ ಮಾಡಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ಸೆ. 2ರಂದು ಜಿಬಿಎ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್ ವಿಂಗಡಣೆ ಆಯೋಗ ರಚಿಸಲಾಗಿತ್ತು. ಆಯೋಗದ ವರದಿ ಆಧರಿಸಿ ನಗರಾಭಿವೃದ್ಧಿ ಇಲಾಖೆ ಸೆ. 30ರಂದು 5 ನಗರ ಪಾಲಿಕೆ ವಾರ್ಡ್ ವಿಂಗಡಣೆಯ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಿದ್ದು, 4000ಕ್ಕೂ ಹೆಚ್ಚು ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಅವುಗಳ ಪರಿಶೀಲನೆ ನಡೆಸಿ ಅಂತಿಮ ಅಧಿಸೂಚನೆಯ ಮೂಲಕ ವಾರ್ಡ್ ಸಂಖ್ಯೆಯನ್ನು ಅಂತಿಮಗೊಳಿಸಲಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ 112, ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ 72, ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ 72, ಬೆಂಗಳೂರು ಪೂರ್ವ ಪಾಲಿಕೆಯಲ್ಲಿ 50, ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ 63 ವಾರ್ಡ್ಗಳು ಇವೆ.
2015ರಲ್ಲಿ ಬಿಬಿಎಂಪಿ 198 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. 2020ರ ಸೆಪ್ಟೆಂಬರ್ ಗೆ 5 ವರ್ಷ ಆಡಳಿತ ಪೂರ್ಣಗೊಂಡಿತ್ತು. ನಂತರ ಎರಡು ಬಾರಿ ವಾರ್ಡ್ ವಿಂಗಡಣೆ ಮಾಡಿದ್ದರೂ ಚುನಾವಣೆ ನಡೆದಿರಲಿಲ್ಲ. ಬಿಬಿಎಂಪಿಯನ್ನು ವಿಸರ್ಜಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲಾಗಿದ್ದು, ಅದರ ಅಡಿ ಐದು ನಗರ ಪಾಲಿಕೆ ರಚಿಸಲಾಗಿದೆ. ಈ ಐದು ನಗರ ಪಾಲಿಕೆಗೆ ವಾರ್ಡ್ ವಿಂಗಡಣೆ ಅಂತಿಮವಾಗಿದ್ದು, ಮೀಸಲಾತಿ ನಿಗದಿಪಡಿಸಿ ಚುನಾವಣೆ ಅಧಿಸೂಚನೆ ಹೊರಡಿಸುವುದಷ್ಟೇ ಬಾಕಿ ಇದೆ. ಎಲ್ಲವೂ ಅಂದುಕೊಂಡಂತೆ ನಡೆದದಲ್ಲಿ ಫೆಬ್ರವರಿ ಅಂತ್ಯದೊಳಗೆ ಚುನಾವಣೆ ನಡೆಯಲಿದೆ ಎನ್ನಲಾಗಿದೆ.
