ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ಪಾಲಿಕೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತಯಾರಿ ನಡೆಸಿದ್ದು, ಮತದಾರರ ಪಟ್ಟಿ ಪರಿಷ್ಕರಣೆಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ಪಾಲಿಕೆಗೆ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಐದು ಪಾಲಿಕೆ ಆಯುಕ್ತರಿಗೆ ಈ ಜವಾಬ್ದಾರಿ ನೀಡಲಾಗಿದೆ. ಚುನಾವಣಾ ಆಯೋಗದ ಆದೇಶದ ಪ್ರಕಾರ ಒಟ್ಟು 368 ವಾರ್ಡ್ ಗಳಿಗೆ ಚುನಾವಣೆ ನಡೆಸಲು ಮತದಾರರ ಪಟ್ಟಿ ಸಿದ್ಧಪಡಿಸಲಾಗುವುದು.
ಪಟ್ಟಿ ಸಿದ್ದಪಡಿಸಲು ಜನವರಿ 19ರ ಅಂತಿಮ ಗಡುವು ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಚುನಾವಣಾ ಆಯೋಗ ತನ್ನದೇ ಮತದಾರರ ಪಟ್ಟಿ ಸಿದ್ಧಪಡಿಸಲು ಮುಂದಾಗಿದೆ. 2025 ರ ಜನವರಿಯಲ್ಲಿನ ಮತದಾರರ ಪಟ್ಟಿ ಪರಿಷ್ಕರಿಸಿ ಅದನ್ನು ಆಧಾರವಾಗಿಟ್ಟುಕೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆ ನಡೆಸಲಾಗುವುದು. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿವೆ.
