ಮದ್ದೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತವಾಗಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವುದನ್ನು ಬಿಜೆಪಿ ವರಿಷ್ಠರು ತೀರ್ಮಾನಿಸುತ್ತಾರೆ. ಆದರೆ, ಮದ್ದೂರು ಕ್ಷೇತ್ರ ನನ್ನ ಪ್ರಥಮ ಆದ್ಯತೆಯಾಗಿದೆ. ನಾನು ಅಥವಾ ಪುತ್ರ ಅಭಿಷೇಕ್ ಪೈಕಿ ಯಾರೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರೂ ಅದು ಮದ್ದೂರಿನಿಂದಲೇ ಎಂದು ತಿಳಿಸಿದ್ದಾರೆ.
2018ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದೆ. ಈಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಪಕ್ಷದ ನಾಯಕರ ತೀರ್ಮಾನದಂತೆ ನಿರ್ಧಾರ ಕೈಗೊಳ್ಳುತ್ತೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರಿನಿಂದ ಸ್ಪರ್ಧೆ ಬಿಜೆಪಿ ನಾಯಕರು ಆಹ್ವಾನಿಸಿದ್ದರು. ಆಗ ರಾಜ್ಯ ರಾಜಕಾರಣದ ಮನಸ್ಸು ಇಲ್ಲ ಎಂದಿದ್ದೆ. ಮದ್ದೂರು ಅಂಬರೀಶ್ ಕರ್ಮ ಭೂಮಿಯಾಗಿದ್ದು, ಹೀಗಾಗಿ ನಾನು ಅಥವಾ ಅಭಿಷೇಕ್ ಇಲ್ಲಿಂದ ಸ್ಪರ್ಧಿಸಬೇಕೆಂಬುದು ಅಭಿಮಾನಿಗಳ ಅಪೇಕ್ಷೆಯಾಗಿದೆ. ನಮ್ಮಿಬ್ಬರಲ್ಲಿ ಒಬ್ಬರು ಮದ್ದೂರಿನಿಂದ ಸ್ಪರ್ಧಿಸುತ್ತೇವೆ ಎಂದು ಹೇಳಿದ್ದಾರೆ.
