ತುಮಕೂರು: ಬೆಂಗಳೂರು -ತುಮಕೂರು ನಡುವೆ ಭವಿಷ್ಯದ ದೃಷ್ಟಿಯಿಂದ ಚತುಷ್ಪಥ ರೈಲು ಮಾರ್ಗ ನಿರ್ಮಾಣ ಯೋಜನೆ ರೂಪಿಸಲಾಗುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ತುಮಕೂರು ರೈಲು ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಯ 11ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ಬೆಂಗಳೂರಿಗೆ ಪೂರಕವಾಗಿ ತುಮಕೂರು ಜಿಲ್ಲೆ ಕೂಡ ಬೆಳೆಯುತ್ತಿದೆ. ರೈಲು ಅವಲಂಬನೆ ಕೂಡ ಹೆಚ್ಚಾಗುತ್ತಿದೆ. ಹೆಚ್ಚುವರಿ ರೈಲುಗಳ ಸೇವೆಯನ್ನು ಕಲ್ಪಿಸಲಾಗುತ್ತಿದ್ದು, ಇದರ ಜೊತೆಗೆ ದ್ವಿಪಥತ ರೈಲು ಮಾರ್ಗವನ್ನು ಚತುಷ್ಪಥ ಮಾರ್ಗವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಜನರಿಗೆ ಅನುಕೂಲ ಮಾಡಿಕೊಡಲು ನಾನು ಕೆಲಸ ಮಾಡುತ್ತಿದ್ದೇನೆ. 50 ವರ್ಷದಿಂದ ನನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳಿಗೆ ಚಾಲನೆ ದೊರಕಿಸಿಕೊಟ್ಟಿದ್ದೇನೆ. ಜಿಲ್ಲೆಯಲ್ಲಿ 28 ರೈಲ್ವೆ ಗೇಟ್ ತೆರವುಗೊಳಿಸಿ ಮೇಲ್ಸೇತುವೆ, ಕೆಳಸೇತುವೆ ನಿರ್ಮಿಸುವ ಕೆಲಸ ಆರಂಭವಾಗಿದ್ದು, ಎರಡು ವರ್ಷಗಳಲ್ಲಿ ಲೋಕಾರ್ಪಣೆಯಾಗಲಿವೆ. 18 ವರ್ಷಗಳಿಂದ ಬಾಕಿ ಇದ್ದ ತುಮಕೂರು- ದಾವಣಗೆರೆ ರೈಲು ಮಾರ್ಗ ಯೋಜನೆ ಕಾಮಗಾರಿಗೆ ವೇಗ ನೀಡಲಾಗಿದೆ ಎಂದು ಸೋಮಣ್ಣ ಹೇಳಿದ್ದಾರೆ.