ನವದೆಹಲಿ: ರಾಜ್ಯದ ಎತ್ತಿನಹೊಳೆ ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ.
ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣ ಕರ್ನಾಟಕದ 7 ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಉದ್ದೇಶ ಹೊಂದಿರುವ ಎತ್ತಿನಹೊಳೆ ಯೋಜನೆಗೆ ಹಂತ 1 ನೀರಾವರಿ ಯೋಜನೆಯ ಮುಂದಿನ ಹಂತಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಯೋಜನೆಯ ಮೊದಲ ಹಂತದಲ್ಲಿ ಹಲವು ಕಾಮಗಾರಿಗಳು ಅನಧಿಕೃತವಾಗಿದೆ. ಇಂತಹ ಕಾಮಗಾರಿಗಳಿಂದ ಪರಿಸರದ ಮೇಲೆ ಭಾರಿ ಅನಾಹುತವಾಗಿದೆ ಎಂದು ಕೇಂದ್ರ ಪರಿಸರ ಇಲಾಖೆಯ ಸಲಹಾ ಸಮಿತಿ ಹೇಳಿದೆ.
ಕಾಮಗಾರಿಗಳನ್ನು ಪರಿಶೀಲಿಸಿದ ಹೊರತೂ ಯೋಜನೆಯ ಮುಂದುವರೆದ ಭಾಗಕ್ಕೆ ಅನುಮತಿ ನೀಡದಂತೆ ಸಲಹೆ ನೀಡಲಾಗಿದೆ. ಅಕ್ಟೋಬರ್ 27 ರಂದು ನಡೆದ ಕೇಂದ್ರ ಪರಿಸರ ಇಲಾಖೆ ಸಭೆಯಲ್ಲಿ ಎತ್ತಿನ ಹೊಳೆ ಮೊದಲ ಹಂತದ ಯೋಜನೆಯ ಬಗ್ಗೆ ದಾಖಲಾದ ಅನೇಕ ಆರೋಪಗಳ ಬಗ್ಗೆ ಸಲಹಾ ಸಮಿತಿ ಬೆಳಕು ಚೆಲ್ಲಿದ್ದು, ಮೊದಲ ಹಂತದ ಹಲವು ಯೋಜನೆಗಳಿಗೆ ಅಕ್ಷೇಪ ಎತ್ತಿದೆ.
ಶರಾವತಿ ಯೋಜನೆ
ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಾಗಿ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟ ಪ್ರದೇಶದ ಸುಮಾರು 54 ಹಕ್ಟೇರ್ ಅರಣ್ಯ ಪ್ರದೇಶವನ್ನು ಬಳಕೆ ಮಾಡುವ ಕರ್ನಾಟಕ ಸರ್ಕಾರದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ. ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಸಭೆ ಈ ನಿರ್ಧಾರ ಕೈಗೊಂಡಿದೆ.
ಈ ಮೂಲಕ ಯೋಜನೆ ಜಾರಿಗೆ ಪಟ್ಟು ಹಿಡಿದಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಪರಿಸರವಾದಿಗಳು ಸ್ಥಳೀಯರ ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ. ಅಕ್ಟೋಬರ್ 27ರಂದು ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಸಭೆ ನಡೆಸಿದ್ದು, ಅದರಲ್ಲಿ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ 15,000ಕ್ಕೂ ಹೆಚ್ಚು ಮರಗಳ ಕಡಿತಕ್ಕೆ ಕಾರಣವಾಗುತ್ತದೆ. ಈ ಮರಗಳಲ್ಲಿ ಹಲವು ವಿಶ್ವದ 34 ಜೀವ ವೈವಿಧ್ಯ ಕೇಂದ್ರಗಳಲ್ಲಿ ಒಂದಾದ ಪಶ್ಚಿಮ ಘಟ್ಟಕ್ಕೆ ಮಾತ್ರವೇ ಸೀಮಿತವಾಗಿದೆ. ಅಪರೂಪದ ಪ್ರಾಣಿ ಸಂಕುಲಕ್ಕೆ ಅಪಾಯವಿದೆ. ಭೂ ಸವಕಳಿ, ಭೂಕುಸಿತಕ್ಕೂ ಕಾರಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
