ಬೆಂಗಳೂರು: ಅಧಿಕೃತ ದಾಖಲೆ ಇಲ್ಲದೆ ಭಾರಿ ಪ್ರಮಾಣದಲ್ಲಿ ನಗದು ಹೊಂದಿದ್ದರೆ ಅದು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 98ರ ಪ್ರಕಾರ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶ ನೀಡಿದೆ.
ಅನಧಿಕೃತ ನಗದು ಸಂಗ್ರಹ ಅಪರಾಧವಾಗುವುದಿಲ್ಲ. ಕಳ್ಳತನ ಇಲ್ಲವೇ ಮೋಸದಿಂದ ಪಡೆದುಕೊಂಡಿರುವುದು ಸಾಬೀತಾಗದಿದ್ದಲ್ಲಿ ಅಧಿಕೃತ ದಾಖಲೆಗಳಿಲ್ಲದಿದ್ದರೂ ಭಾರಿ ಪ್ರಮಾಣದ ನಗದು ಹೊಂದಿದ್ದರೆ ಅದು ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 98ರ ಪ್ರಕಾರ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಚೆಕ್ ಪೋಸ್ಟ್ ನಲ್ಲಿ 8.38 ಲಕ್ಷ ರೂ. ಪತ್ತೆಯಾದ ಸಂಬಂಧ ಆಂಧ್ರಪ್ರದೇಶ ಮೂಲದ ಆರ್. ಅಮರನಾಥ್ ವಿರುದ್ಧ ದಾಖಲಿಸಿದ ಪ್ರಕರಣ ರದ್ದು ಕೋರಿ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
ಅಪರಾಧ ಸಾಬೀತುಪಡಿಸಬೇಕಾದರೆ ಆ ನಗದನ್ನು ಕಳುವು ಮಾಡಿರುವುದು ಇಲ್ಲವೇ ವಂಚನೆ ಎಸಗುವ ಮೂಲಕ ಗಳಿಸಲಾಗಿದೆ ಎಂಬುದನ್ನು ರುಜುವಾತು ಪಡಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಕಾಯ್ದೆಯ ಸೆಕ್ಷನ್ 98ರ ಅಡಿಯಲ್ಲಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವು ನಾನ್ ಕಾಗ್ನಿಜೇಬಲ್ ಅಪರಾಧವಾಗಿದೆ. 1973ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 155(2)ರ ನಿಬಂಧನೆಗಳ ಪ್ರಕಾರ ಪೊಲೀಸರು ನಾನ್ ಕಾಗ್ನಿಜೇಬಲ್ ಅಪರಾಧವನ್ನು ತನಿಖೆ ನಡೆಸಲು ಪ್ರಯತ್ನಿಸಿದಾಗ ಯಾವುದೇ ತನಿಖೆಯನ್ನು ಆರಂಭಿಸುವ ಮೊದಲು ಮ್ಯಾಜಿಸ್ಟ್ರೇಟ್ ಅವರಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ, ಈ ಪ್ರಕರಣದಲ್ಲಿ ಪೂರ್ವಾನುಮತಿ ಪಡೆದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಈ ಪ್ರಕರಣದಲ್ಲಿ ಆರೋಪ ಪಟ್ಟಿ ಸೇರಿದಂತೆ ದಾಖಲೆಯಲ್ಲಿರುವ ವಸ್ತುಗಳು ಅರ್ಜಿದಾರರ ಬಳಿ ದೊರೆತ ನಗದು ಕದ್ದ ಆಸ್ತಿ ಅಥವಾ ವಂಚನೆಯಿಂದ ಪಡೆಯಲಾಗಿದೆ ಎಂಬುದರ ಬಗ್ಗೆ ಸಮಂಜಸವಾದ ಯಾವುದೇ ನಂಬಿಕೆ ಅಥವಾ ಅನುಮಾನವಿದೆ ಎಂದು ಸೂಚಿಸುವುದಿಲ್ಲ. ಇಂತಹ ಯಾವುದೇ ಆರೋಪ ಅಥವಾ ಸಮಂಜಸವಾದ ಅನುಮಾನ ದಾಖಲೆಯಲ್ಲಿ ಇಲ್ಲದಿದ್ದರೆ ಕಾಯ್ದೆಯ ಸೆಕ್ಷನ್ 98ರ ಅಡಿಯಲ್ಲಿ ಅಪರಾಧ ಸಾಬೀತುಪಡಿಸಲು ಅಗತ್ಯವಿರುವ ಅಂಶಗಳು ಸ್ಪಷ್ಟವಾಗಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧದ ವಿಚಾರಣೆಯನ್ನು ಮುಂದುವರಿಸಲು ಅವಕಾಶ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.