ಬೆಂಗಳೂರು: ಹಿಂದುಳಿದ ವರ್ಗ 2ಎ ಅಡಿಯಲ್ಲಿ ಪೋಷಕರ ವಾರ್ಷಿಕ ಆದಾಯ ನಿಗದಿತ ಮಿತಿ ದಾಟಿದ್ದರೆ ಅಭ್ಯರ್ಥಿಯು ಮೀಸಲಾತಿ ಪತ್ರ ಪಡೆಯಲು ಅನರ್ಹರಾಗುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಾತಿ, ಆದಾಯ ಪರಿಶೀಲನಾ ಮೇಲ್ಮನವಿ ಪ್ರಾಧಿಕಾರ, ಧಾರವಾಡ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷರು ಸಲ್ಲಿಸಿದ್ದ ರಿಟ್ ಮೇಲ್ಮನವಿ, ನ್ಯಾಯಾಂಗ ನಿಂದನಾ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗಿಯ ಪೀಠ ಈ ಬಗ್ಗೆ ಆದೇಶ ನೀಡಿದೆ.
ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಧಾರವಾಡದ ರಾಘವೇಂದ್ರ ಪ್ರವರ್ಗ 2ಎ ಅಡಿ ಆಯ್ಕೆಯಾಗಿದ್ದರು. ಅದರಂತೆ ಮೀಸಲಾತಿ ಪತ್ರಕ್ಕಾಗಿ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಅಭ್ಯರ್ಥಿಯ ಪೋಷಕರ ಆದಾಯವು ಪ್ರವರ್ಗ 2ಎ ಗೆ ನಿಗದಿಪಡಿಸಿದ ವಾರ್ಷಿಕ ಆದಾಯ ಮಿತಿ 8 ಲಕ್ಷ ಮೀರಿದ ಕಾರಣ ಹಿಂದುಳಿದ ವರ್ಗದಡಿ ಮೀಸಲಾತಿ ಪಡೆಯಲು ಅರ್ಹರಲ್ಲ ಎಂದು ಸಮಿತಿ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ರಾಘವೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯ ಪೀಠ 2024ರ ಅಕ್ಟೋಬರ್ ನಲ್ಲಿ ಅಭ್ಯರ್ಥಿ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹ ಎಂದು ತೀರ್ಪು ನೀಡಿತ್ತು.
ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಸರ್ಕಾರ ವಿಭಾಗೀಯ ನ್ಯಾಯಪೀಠದಲ್ಲಿ ಪ್ರಶ್ನಿಸಿತ್ತು. ಸರ್ಕಾರದ ಪರ ವಾದ ಮಂಡಿಸಿದ ನಮಿತಾ ಮಹೇಶ್ ಅವರ ವಾದವನ್ನು ನ್ಯಾಯಪೀಠ ಮನ್ನಿಸಿದೆ. ಅಭ್ಯರ್ಥಿಯ ಪೋಷಕರ ವೇತನವೂ ಸೇರಿದಂತೆ ಎಲ್ಲಾ ಮೂಲಗಳ ಆದಾಯವನ್ನು ಪರಿಗಣಿಸಬೇಕು. ಒಂದು ವೇಳೆ ಆದಾಯ ನಿಗದಿತ ಮಿತಿ ದಾಟಿದಲ್ಲಿ ಆದಾಯ ತೆರಿಗೆ ಪಾವತಿದಾರ ಆಗಿದ್ದರೆ ಆತನಿಗೆ ಕೆನೆ ಪದರ ನಿಯಮ ಅನ್ವಯವಾಗುತ್ತದೆ. ಅಭ್ಯರ್ಥಿ ಪ್ರವರ್ಗ 2ಎ ಮೀಸಲಾತಿಯ ಅಧಿಕಾರ ಹೊಂದುವ ಬೇಡಿಕೆ ಸಲ್ಲಿಸಲು ಅವಕಾಶ ಹೊಂದಿರುವುದಿಲ್ಲ ಎಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.
