ಬೆಂಗಳೂರು: ಎಲ್ಲಾ ಶಾಲೆಗಳಲ್ಲೂ ಹೆಣ್ಣು ಮಕ್ಕಳಿಗೆ ಶೇಕಡ 50ರಷ್ಟು ಸೀಟುಗಳನ್ನು ಕಡ್ಡಾಯವಾಗಿ ಮೀಸಲಿಡಬೇಕೆಂದು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.
ರಾಜ್ಯ ಪಠ್ಯಕ್ರಮ, CBSE, ICS ಸೇರಿ ಸಹ ಶಿಕ್ಷಣ ಹೊಂದಿರುವ ರಾಜ್ಯದ ಎಲ್ಲಾ ಮಾದರಿ ಖಾಸಗಿ ಶಾಲೆಗಳಲ್ಲಿಯೂ ಶೇಕಡ 50ರಷ್ಟು ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಮೀಸಲಿಡಬೇಕು ಎಂದು ಹೇಳಲಾಗಿದೆ.
2025- 26ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ಸುತ್ತೋಲೆ ಹೊರಟಿಸಿದ್ದಾರೆ. ಶಾಲಾ ಪ್ರವೇಶಕ್ಕೆ ವಿದ್ಯಾರ್ಥಿ ಹಾಗೂ ಪೋಷಕರ ಪರೀಕ್ಷೆ ಸಂದರ್ಶನ ನಡೆಸುವುದು ಕಾನೂನುಬಾಹಿರವಾಗಿದೆ. ಶುಲ್ಕ ಮಾಹಿತಿ ಕುರಿತು ನೋಟಿಸ್ ಬೋರ್ಡ್, ವೆಬ್, ಎಸ್.ಎ.ಟಿ.ಎಸ್. ತಂತ್ರಾಂಶದಲ್ಲಿ ಪ್ರಕಟಿಸಬೇಕು. ಪ್ರವೇಶ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಸೀಟುಗಳ ವಿವರ, ಪ್ರವೇಶ, ವೇಳಾಪಟ್ಟಿ ಪ್ರಕಟಿಸಬೇಕು.
ಶೇಕಡ 50ರಷ್ಟು ಸೀಟುಗಳ ಪ್ರವೇಶಕ್ಕೆ ಹೆಣ್ಣು ಮಕ್ಕಳು ಬರದಿದ್ದಲ್ಲಿ ಉಳಿಕೆ ಸೀಟುಗಳನ್ನು ಮೀಸಲಾತಿ ನಿಯಮದಂತೆ ಗಂಡು ಮಕ್ಕಳಿಗೆ ನೀಡಬೇಕು ಎಂದು ಹೇಳಲಾಗಿದೆ. ವಿಶೇಷ ಚೇತನ ಮಕ್ಕಳಿಗೆ ನಿಯಮಾನುಸಾರ ದಾಖಲಾತಿಗೆ ಅವಕಾಶ ನೀಡಬೇಕು. ಎಸ್ಸಿ ಎಸ್ಟಿ ಮಂಡಳಿಗಳಿಂದ ನಡೆಯುತ್ತಿರುವ ಅನುದಾನಿತ ಶಾಲೆಗಳಲ್ಲಿ ಶೇಕಡ 50ರಷ್ಟು ಸೀಟುಗಳನ್ನು ಆ ಸಮುದಾಯದ ಮಕ್ಕಳಿಗೆ ನೀಡಬೇಕು. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.