ಗೊಂದಲ ಮೂಡಿಸುತ್ತಿರುವ ಎನ್ಇಪಿ ರದ್ದುಗೊಳಿಸಲು ಸಲಹೆ

ಶಿವಮೊಗ್ಗ: ಗೊಂದಲ ಮೂಡಿಸುತ್ತಿರುವ ಎನ್‌ಇಪಿಯನ್ನು ಹೊಸ ಸರ್ಕಾರ ರದ್ದುಗೊಳಿಸಬೇಕು ಎಂದು ಕುವೆಂಪು ವಿವಿ ಇತಿಹಾಸ ಪರೀಕ್ಷಾ ಮಂಡಳಿಯ ಅಧ್ಯಕ್ಷ ಹಾಗೂ ಡಿವಿಎಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಕೆ.ಜಿ. ವೆಂಕಟೇಶ್ ಹೇಳಿದರು.

ಅವರು ಇಂದು ಕುವೆಂಪು ವಿವಿ ಇತಿಹಾಸ ಅಧ್ಯಾಪಕರ ಸಂಘ ವಿವಿ ನಗರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಎನ್‌ಇಪಿ ಇತಿಹಾಸ ಪಠ್ಯಕ್ರಮ ಕುರಿತು ಕಾರ್ಯಾಗಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಸನ್ಮಾನಿತರಾಗಿ ಮಾತನಾಡಿದರು.

ಇತಿಹಾಸಕ್ಕೆ ತನ್ನದೇ ಆದ ಪರಂಪರೆ ಇದೆ. ಕಾಲಗಣನೆ ಮುಖ್ಯವಾಗುತ್ತದೆ. ಮೊದಲಿನ ರೀತಿಯ ಅಚ್ಟುಕಟ್ಟುತನ ಈಗಿಲ್ಲ. ಇದರ ಮಧ್ಯೆ ಎನ್‌ಇಪಿ ಹೊಸ ಪಠ್ಯಕ್ರಮ ಬಂದಿದೆ. ಆದರೆ ಅದು ಇನ್ನೂ ಗೊಂದಲದಲ್ಲಿದೆ. ಹಲವು ಕಿರಿಕಿರಿಗೆ ಕಾರಣವಾಗಿದೆ. ಬಹಳಷ್ಟು ಇತಿಹಾಸ ಪ್ರಾಧ್ಯಾಪಕರು ಈ ಪಠ್ಯಕ್ರಮಕ್ಕೆ ಸಿಟ್ಟು ಮತ್ತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಠ್ಯ ಕ್ರಮ ಕೂಡ ಸರಿ ಇಲ್ಲ. ಅಧ್ಯಾಪಕರು ಪಾಠ ಮಾಡುವುದೇ ಕಷ್ಟವಾಗುತ್ತದೆ ಎಂದರು.

ಉದಾಹರಣೆಗೆ ಹಬ್ಬದ ಬಗ್ಗೆ ಪಠ್ಯವಿದೆ. ದೀಪಾವಳಿ ಎಂದೇ ಇಟ್ಟುಕೊಳ್ಳೋಣ. ಹೇಗೆ ಆಚರಿಸುತ್ತಾರೆ ಎಂಬ ಪ್ರಶ್ನೆ ಬಂದಾಗ ಹಲವರು ದೀಪ ಹಚ್ಚಿ ಎಂದು ಹೇಳಬಹುದು. ಕೆಲವರು ಕೋಳಿ ಕೊಯ್ದೆವು ಎನ್ನಬಹುದು. ಆದರೆ ಯಾವುದಕ್ಕೆ ಅಂಕ ನೀಡಬೇಕು ಎನ್ನುವುದೇ ಕಷ್ಟವಾಗುತ್ತದೆ. ಮತ್ತು ಮೌಲ್ಯಮಾಪಕರಿಗೂ ಕೂಡ ಇದು ಕಷ್ಟವಾಗಿ ಅವರವರ ಮನಸ್ಸಿಗೆ ತಕ್ಕಂತೆ ಅಂಕ ನೀಡಬಹುದಲ್ಲವೆ ಎಂದು ಪ್ರಶ್ನೆ ಮಾಡಿದರು.

ಎನ್‌ಇಪಿ ಪಠ್ಯ ಕ್ರಮಕ್ಕೆ ಹಲವು ಅಧ್ಯಾಪಕರು ಒಪ್ಪುತ್ತಿಲ್ಲ. ಮತ್ತು ಕಾರ್ಯಾಗಾರಗಳಿಗೂ ಗೈರುಹಾಜರಾಗುತ್ತಿದ್ದಾರೆ. ಯಾವ ಅಧ್ಯಯನವನ್ನೂ ಮಾಡದೆ ಅಧ್ಯಾಪಕರೊಂದಿಗೆ ಚರ್ಚೆ ಮಾಡದೆ ದಿಢೀರ್ ಆಗಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಹೊಸ ಸರ್ಕಾರ ಎನ್‌ಇಪಿಯನ್ನು ರದ್ದುಗೊಳಿಸಬೇಕಾಗಿದೆ ಎಂದರು.

ಅಧ್ಯಾಪಕರ ಸಂಘದ ಉಪಾಧ್ಯಕ್ಷ ಡಿ. ನಾಗೇಶ್ ಗೌಡ ಮಾತನಾಡಿ, ಇತಿಹಾಸಕಾರರಿಗೆ ಸ್ಪಷ್ಟತೆ ಇರಬೇಕು. ನಮ್ಮ ಸುತ್ತಮುತ್ತಲ ಪರಿಸರ ಇದಕ್ಕೆ ಪೂರಕವಾಗಿಲ್ಲ. ಇತಿಹಾಸದಿಂದ ವಿದ್ಯಾರ್ಥಿಗಳು ವಿಮುಕ್ತರಾಗುತ್ತಿರುವುದು ಬೇಸರದ ಸಂಗತಿ ಎಂದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read