ಬೆಂಗಳೂರು: ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವಂತೆ ಸ್ಪೀಕರ್ ಯು.ಟಿ. ಖಾದರ್ ನಡೆಸಿದ್ದ ಬಿಜೆಪಿ ನಾಯಕರ ಮನವೊಲಿಕೆ ಯತ್ನ ವಿಫಲವಾಗಿದೆ.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಶ್ನೋತ್ತರ ಕಲಾಪಕ್ಕೆ ಅಡ್ಡಿಪಡಿಸಿದ್ದ ಬಿಜೆಪಿ ಸದಸ್ಯರು ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಸದನದಲ್ಲಿ ಪ್ರತಿಭಟನೆ ನಡೆಸಿದ್ದರು. ಸದನದಲ್ಲಿ ಗದ್ದಲ-ಕೋಲಾಹಲ ಹೆಚ್ಚಾದ ಕಾರಣಕ್ಕೆ ಸ್ಪೀಕರ್ ಯು.ಟಿ. ಖಾದರ್ ಕಲಾಪವನ್ನು ಕೆಲ ಕಾಲ ಮುಂದೂಡಿದ್ದರು.
ಅಲ್ಲದೇ ಬಿಜೆಪಿ ಸದಸ್ಯರನ್ನು ತಮ್ಮ ಕಚೇರಿಗೆ ಕರೆದು ಸಂಧಾನ ಸಭೆ ನಡೆಸಿದ್ದರು. ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆಗೆ ಅವಕಾಶ ಕೊಡುತ್ತೇವೆ. ಪ್ರಶ್ನೋತ್ತರ ಕಲಾಪ ಮೊದಲು ನಡೆಸಲು ಬಿಡಿ ಎಂದು ಮನವೊಲಿಕೆಗೆ ಮುಂದಾದರು. ಆದರೆ ಸ್ಪೀಕರ್ ಮಾತಿಗೆ ಒಪ್ಪದ ಬಿಜೆಪಿ ಸದಸ್ಯರು ಮತ್ತೆ ಬರುವುದಾಗಿ ಹೇಳಿ ಸ್ಪೀಕರ್ ಕಚೇರಿಯಿಂದ ತೆರಳಿದ್ದಾರೆ. ಸ್ಪೀಕರ್ ನಡೆಸಿದ್ದ ಸಂಧಾನ ಸಭೆ ವಿಫಲವಾಗಿದೆ.
ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ನಾಯಕರು ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲವನ್ನು ಮುಂದುವರೆಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.